– ಅಲ್ಪ ಮತ ತೆಗೆದುಕೊಂಡು ಸಮಾಜ ತಲೆ ತಗ್ಗಿಸುವಂತೆ ಮಾಡಬೇಡಿ
ಚಿತ್ರದುರ್ಗ: ಸ್ವಾಮೀಜಿ ಆಗಿದ್ದೀರಿ ಗೌರವದಿಂದ ಇರಿ, ಇಲ್ಲಾ, ಖಾವಿ ಬಿಚ್ಚಿ ಹಾಕಿ ರಾಜಕೀಯ ಮಾಡಿ ಎಂದು ರಾಜ್ಯ ಪರಿಶಿಷ್ಠ ಪಂಗಡ ಹಾಗೂ ಪರಿಶಿಷ್ಠ ಜಾತಿ ಆಯೋಗದ ಅಧ್ಯಕ್ಷ ನೆಹರು ಓಲೇಕರ್ ಅವರು ಛಲವಾದಿ ಗುರುಪೀಠದ ಶ್ರೀಬಸವ ನಾಗೀದೇವ ಸ್ವಾಮೀಜಿ ಅವರಿಗೆ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲೆಯ ಛಲವಾದಿ ಸಮುದಾಯದ ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ರಾಜಕೀಯ ಮಾಡುವುದಾದರೆ ಖಾವಿ ಬಿಚ್ಚಿ ಹಾಕಿ, ರಾಜಕೀಯ ಮಾಡಿ. ಖಾವಿ ಹಾಕಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಪ ಪ್ರಮಾಣದ ಮತ ತೆಗೆದುಕೊಂಡು ಸಮಾಜ ತಲೆ ತಗ್ಗಿಸುವ ಕೆಲಸ ಮಾಡಬೇಡಿ. ಖಾವಿ ಹಾಕಿ ರಾಜಕೀಯ ಮಾಡಿದರೆ ನಮಗೆ ನಾಚಿಕೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕೀಯ ಸುಲಭವಾದ ಕೆಲಸ ಅಲ್ಲ. ತಲೆ ತಗ್ಗಿಸುವ ಕೆಲಸ ಮಾಡಬೇಡಿ. ಮಾಡಿದರೆ ನಿಮ್ಮ ಮೇಲಿನ ಗೌರವ ಕಡಿಮೆ ಆಗಲಿದೆ. ಸ್ವಾಮೀಜಿ ಆಗಿ ಸಮಾಜವನ್ನು ಕಟ್ಟುವ ಕೆಲಸ ಮಾಡಿ, ಕೆಳಮಟ್ಟದ ಸಮುದಾಯವನ್ನು ಮೇಲೆ ಎತ್ತಿ. ಸಾಮಾಜಿಕ, ಶೈಕ್ಷಣಿಕ ಹಾಗೂ ಅರ್ಥಿಕವಾಗಿ ಬೆಳೆಸಿದರೆ ನಿಮ್ಮ ಜನರೆ ನಿಮ್ಮನ್ನು ಗೌರವಿಸುತ್ತಾರೆ ಎಂದರು. ಇದಕ್ಕೆ ವೇದಿಕೆಯಲ್ಲಿ ಸಾನಿಧ್ಯ ವಹಿಸಿ ಕುಳಿತಿದ್ದ ಶ್ರೀ ಬಸವ ನಾಗೀದೇವ ಸ್ವಾಮೀಜಿ ಮೌನ ವಹಿಸಿ ತಲೆಯಾಡಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಹೆಚ್.ಸಿ.ನಿರಂಜನಮೂರ್ತಿ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್.ರುದ್ರಮುನಿ, ಜಿ.ಪಂ.ಮುಖ್ಯ ಲೆಕ್ಕ ಅಧೀಕ್ಷಕ ಓಂಕಾರಪ್ಪ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾರ್ಗವಿ ದ್ರಾವಿಡ್, ಗುರುಮೂರ್ತಿ, ಯಶವಂತ್, ತಿಪ್ಪೇಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.