– ಸೋನಿಯಾ ಗಾಂಧಿ ಪಕ್ಷದ ತಾಯಿ ಸ್ಥಾನದಲ್ಲಿದ್ದಾರೆ
– ಮೋದಿ ವಿರುದ್ಧ ಫೈಟ್‍ಗೆ ರಾಹುಲ್ ರೈಟ್ ಪರ್ಸನ್
ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಧಿಕಾರದಲ್ಲಿದ್ದಾಗಲೂ ಈ ಸ್ಥಿತಿ ಇರಲಿಲ್ಲ. ಹೀಗಾದರೆ ಈ ದೇಶದ ಗತಿ ಏನಾಗಬೇಕು?. ಸ್ವಾತಂತ್ರ್ಯ ಬಂದ ನಂತರ ಇಂದಿನ ಭಾರತದ ಸ್ಥಿತಿ ಎಂದೂ ಬಂದಿರಲಿಲ್ಲ ಎಂದು ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ನಗರದಲ್ಲಿ ಇಮದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಡಿ.ಪಿ. ನೆಲಕಚ್ಚಿದೆ. ನಿರುದ್ಯೋಗಿಗಳಿಗೆ ಇವರು ಉದ್ಯೋಗ ಕೊಟ್ಟಿಲ್ಲ. ಮೋದಿ ಬಂದ ಮೇಲೆ ದೇಶ ಉದ್ಧಾರ ಆಗಿದೆ ಎಂಬಂತೆ ಮಾಧ್ಯಮಗಳಲ್ಲಿ ಬಿಂಬಿತವಾಗ್ತಿದೆ ಎಂದು ಕಿಡಿಕಾರಿದರು.
ಇದೇ ವೇಳೆ ನಿನ್ನೆ ನಡೆದ ಸಿ.ಡಬ್ಲ್ಯು.ಸಿ ಸಭೆಯ ಬಗ್ಗೆ ಮಾತನಾಡಿದ ಅವರು, ಸಭೆಯಲ್ಲಿ ಎಲ್ಲಾ ಸದಸ್ಯರಿಗೂ ಮಾತನಾಡಲು ಅವಕಾಶ ಕಲ್ಪಿಸಿ ಸುಧೀರ್ಘ ಚರ್ಚೆ ನಡೆಸಿದ್ದು ನನ್ನ ಅನುಭವದಲ್ಲಿ ಇದೇ ಮೊದಲು. ಕೋಲ್ಕತ್ತಾ ಅಧಿವೇಶನದ ನಂತರ ಇಲ್ಲಿಯವರೆಗೆ ಕಾರ್ಯಕಾರಿ ಸಮಿತಿ ಆಯ್ಕೆ, ಎಐಸಿಸಿ ಅಧಿವೇಶನ ನಡೆದಿರಲಿಲ್ಲ. ಇವೆಲ್ಲ ಸಂಪ್ರದಾಯದಂತೆ ನಡೆಯಬೇಕು ಅನ್ನೋದು ಎಲ್ಲರ ಅಭಿಪ್ರಾಯ ಆಗಿತ್ತು. ಸೋನಿಯಾ ಗಾಂಧಿ ಅವರು ಪಕ್ಷದ ತಾಯಿಯ ಸ್ಥಾನದಲ್ಲಿದ್ದಾರೆ. ಅವರೇ ನಿನ್ನೆ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದಿದ್ದಾರೆ. ಪಕ್ಷ ಎಂದ ಮೇಲೆ ಇವೆಲ್ಲ ಬರೋದು ಸಹಜ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಮಾತಾಡುವ ಅವಕಾಶ ಇರಬೇಕು. ಸೋನಿಯಾ ಗಾಂಧಿ ಅವರ ನಾಯಕತ್ವ ಪ್ರಶ್ನೆ ಮಾಡಿಲ್ಲ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬಗ್ಗೆ ನಮಗೆ ಗೌರವವಿದೆ. ಪಾರ್ಟಿ ನಾಯಕರ ವಿರುದ್ಧ ಯಾರೂ ಮಾತಾಡಿಲ್ಲ. ಕಾಂಗ್ರೆಸ್ಸಿನಲ್ಲಿ ಅಧಿಕಾರವಿಲ್ಲದೆ ಹೆಚ್ಚು ಕಾಲ ಅಧ್ಯಕ್ಷರಾಗಿದ್ದವರು ಸೋನಿಯಾ. ಪ್ರಧಾನಿ ತರಹದ ದೊಡ್ಡದಾದ ಹುದ್ದೆ ಬಿಟ್ಟು, ಹತ್ತು ವರ್ಷಗಳ ಕಾಲ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಆ ಮೂಲಕ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ ಎಂದರು.
ನಾನೂ ಸಹ ಸಿ.ಡಬ್ಲ್ಯು.ಸಿ ಸಭೆಯಲ್ಲಿ ಇದ್ದೆ. ಆದರೆ ಎಲ್ಲೂ ಕೂಡ ರಾಹುಲ್ ಗಾಂಧಿ 23 ಹಿರಿಯ ನಾಯಕರು ಬಿಜೆಪಿ ಜತ ಕೈಜೋಡಿಸಿದ್ದಾರೆ ಅಂತ ಹೇಳಿಲ್ಲ. ಸೋನಿಯಾ ಗಾಂಧಿಯವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿರುವ ಸಮಯದಲ್ಲಿ ಈ ರೀತಿ ಪತ್ರ ಬರೆದದ್ದು ಯಾಕೆ ಅಂತ ಪ್ರಶ್ನೆ ಮಾಡಿ ಬೇಸರ ವ್ಯಕ್ತಪಡಿಸಿದರು ಅಷ್ಟೇ ಎಂದು ತಿಳಿಸಿದರು.
ಸಿ.ಡಬ್ಲ್ಯು.ಸಿ ಸಭೆಯಲ್ಲಿ ಎಲ್ಲಾ 52 ಸದಸ್ಯರು ಭಾಗವಹಿಸಿ ಮಾತಾಡಿದ್ದಾರೆ. ಸಾಂಸ್ಥಿಕ ಚುನಾವಣೆಯ ನಂತರ ಮತ್ತೆ ರಾಹುಲ್ ಗಾಂಧಿ ಮತ್ತೆ ಎಐಸಿಸಿ ಅಧ್ಯಕ್ಷರಾಗುವ ವಾತಾವರಣ ಇದೆ. ರಾಹುಲ್ ಗಾಂಧಿಯವರೇ ಮೋದಿಯವರ ವಿರುದ್ಧ ಫೈಟ್ ಮಾಡಲು ರೈಟ್ ಪರ್ಸನ್ ಈಗಲೂ ನಾನು ಹೇಳ್ತೀನಿ. ಪ್ರಧಾನಿ ನರೇಂದ್ರ ಮೋದಿ ಎದುರು ನಿಲ್ಲುವ ಶಕ್ತಿ ಇರೋದು ರಾಹುಲ್ ಗಾಂಧಿಗೆ ಮಾತ್ರ. ಪ್ರಧಾನಿ ಮೋದಿ, ರಾಹುಲ್ ಕೇಳಿರೋ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಕೊಟ್ಟಿಲ್ಲ ಎಂದರು.
ಫೆಬ್ರವರಿ 12 ರಂದು ರಾಹುಲ್ ಗಾಂಧಿ ಒಂದು ಮಾತು ಹೇಳಿದ್ದರು. ಕೊರೊನಾ ಚೀನಾದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಹೀಗಾಗಿ ಭಾರತಕ್ಕೆ ಬಾರದಂತೆ ತಡೆಯಲು ವೈಜ್ಞಾನಿಕ ಕ್ರಮ ಕೈಗೊಳ್ಳಿ ಅಂದರು. ಆದರೆ ಕೇಂದ್ರ ಆರೋಗ್ಯ ಸಚಿವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ರಾಹುಲ್ ಗಾಂಧಿಯವರು ಧ್ವನಿ ಎತ್ತಿದಾಗ ಬಿಜೆಪಿಯವರು ಟೀಕೆ ಮಾಡಿದರು. ವಿರೋಧ ಪಕ್ಷಗಳ ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮವಹಿಸುವಲ್ಲಿ ವಿಫಲರಾದರು. ಈಗ ಯುದ್ಧದ ಕಡೆ ಗಮನ ಕೊಡ್ತಿದ್ದಾರೆ. ಚೀನಾ ಗಡಿರೇಕೆ ದಾಟಿ ಒಳಗೆ ಬಂದಿದೆ ಎಂದು ಸಿಡಿಮಿಡಿಗೊಂಡರು.