ಧಾರವಾಡ: ಕೋವಿಡ್ ಕುರಿತು ಜನರಲ್ಲಿ ಜಾಗೃತಿ ಹಾಗೂ ಸೋಂಕಿತರ ಚಿಕಿತ್ಸೆ, ಆರೈಕೆಗಾಗಿ ಶ್ರಮಿಸುತ್ತಿರುವ ಸುಮಾರು 75ಕ್ಕೂ ಹೆಚ್ಚು ಕೊರೊನಾ ವಾರಿಯರ್ಸ್‍ಗಳಿಗೆ 74 ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸತ್ಕರಿಸಿದರು.
ನಗರದ ಆರ್‍ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಕಂದಾಯ ಇಲಾಖೆ, ವೈದ್ಯಕೀಯ ಪ್ರಯೋಗಾಲಯದ ತಂತ್ರಜ್ಞರು, ಕಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ಸಿಬ್ಬಂದಿ ಸೇರಿ ಬೇರೆ ಬೇರೆ ಇಲಾಖೆಯ ಹಲವು ವಾರಿಯರ್ಸ್‍ಗಳಿಗೆ ಶೆಟ್ಟರ್ ಸನ್ಮಾನ ಮಾಡಿದರು.
ಇದೇ ವೇಳೆ ಜಿಲ್ಲೆಯ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಅತಿಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಬ್ಬರಿಗೆ ಸ್ವಾತಂತ್ರ್ಯ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಹೆಸರಿನಲ್ಲಿ ನೀಡುವ ತಲಾ ಒಂದು ಲಕ್ಷ ರೂ.ನಗದು ಬಹುಮಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರು ಸತ್ಕರಿಸಿದರು.