ಸ್ವರ್ಣ ನದಿಯ ಹೂಳೆತ್ತುವ ನೆಪದಲ್ಲಿ ಕೋಟ್ಯಂತರ ಮೌಲ್ಯದ ಮರಳು ಲೂಟಿ- ಕಾಂಗ್ರೆಸ್ ಆರೋಪ

Public TV
2 Min Read
UDP 11

ಉಡುಪಿ: ಹೂಳೆತ್ತುವ ಯೋಜನೆಯನ್ನು ಬಳಸಿಕೊಂಡು ಸ್ವರ್ಣ ನದಿಯಿಂದ ಕೋಟ್ಯಂತರ ಮೌಲ್ಯದ ಮರಳು ದೋಚಲಾಗಿದೆ. ಅಪರ ಜಿಲ್ಲಾಧಿಕಾರಿ ನೇತೃತ್ವದ 14 ಜನರ ಸಮಿತಿ ಅಕ್ರಮ ಮಾಡಿದೆ ಅಂತ ಉಡುಪಿ ಜಿಲ್ಲಾ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಮುಖಂಡರು, ಗುತ್ತಿಗೆಯನ್ನು ಬ್ಲ್ಯಾಕ್ ಲಿಸ್ಟ್ ನಲ್ಲಿರುವ ಯೋಜಕ್ ಕಂಪನಿಗೆ ಟೆಂಡರ್ ನೀಡಲಾಗಿದೆ. ಹೂಳು ತೆಗೆಯುವ ಎಲ್ಲಾ ನಿಯಮ ಗಾಳಿಗೆ ತೂರಲಾಗಿದೆ. ಹಿರಿಯಡ್ಕ ವ್ಯಾಪ್ತಿಯ ಕಾಡುಗಳಲ್ಲಿ ಅಕ್ರಮ ದಾಸ್ತಾನು ಮಾಡಲಾಗಿದೆ. ಬಹುಕೋಟಿ ಅಕ್ರಮದ ಬಗ್ಗೆ ಜಿಲ್ಲಾಧಿಕಾರಿ, ಸ್ಥಳೀಯ ಶಾಸಕ ರಘುಪತಿ ಭಟ್, ಮರಳು ದಾಸ್ತಾನು ಮಾಡಿದ ಏರಿಯಾದ ಶಾಸಕ ಲಾಲಾಜಿ ಮೆಂಡನ್ ಉತ್ತರಿಸಬೇಕು ಎಂದು ಒತ್ತಾಯಿಸಿದರು.

Congress flag 2 e1573529275338

ಶಾಮೀಲಾದವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಎಸಿಬಿ, ಲೋಕಾಯುಕ್ತಕ್ಕೆ ಕಾಂಗ್ರೆಸ್ ದೂರು ನೀಡಿದೆ. ಕೊರೊನಾ ಪರಿಸ್ಥಿತಿ ಬಳಸಿ ದೇಶದ ಸಂಪತ್ತು ಕೊಳ್ಳೆ ಹೊಡೆಯಲಾಗಿದೆ ಎಂದು ಈ ಹಿಂದೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟ್ವೀಟ್ ಮಾಡಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಮಾತನಾಡಿ, ಆರಂಭದಲ್ಲಿ ಗೋಕುಲ್ ದಾಸ್ ಶೆಟ್ಟಿ ಎಂಬವರಿಗೆ ಟೆಂಡರ್ ಆಗಿತ್ತು. ಕಾನೂನು ಬಾಹಿರವಾಗಿ ಅದನ್ನು ರದ್ದು ಮಾಡಿ ಮಂಗಳೂರಿನ ಯೋಜಕ ಎಂಬ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ನಿಯಮಾವಳಿಯಂತೆ ಸ್ಥಳದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಇದ್ದು ಸಿಸಿಟಿವಿ ಅಳವಡಿಸಿ ಭದ್ರತಾ ಸಿಬ್ಬಂದಿ ನೇಮಿಸಬೇಕಿತ್ತು. ಮಣ್ಣು ಮತ್ತು ಮರಳನ್ನು ಬೇರ್ಪಡಿಸಿ ನಂತರ ಗಣಿ ಇಲಾಖೆಯ ಮೂಲಕ ಅದನ್ನು ಮಾರಾಟ ಮಾಡಬೇಕು ಎಂಬುದು ನಿಯಮ. ಆದರೆ ನಿಯಮವನ್ನು ಗಾಳಿಗೆ ತೂರಲಾಗಿದೆ. ಹೂಳು ತುಂಬಿದ ಪ್ರದೇಶವನ್ನು ಬಿಟ್ಟು ಅಣೆಕಟ್ಟಿನಿಂದ ದೂರ ಇರುವ ಶೀರೂರು, ಮಾಣೈ ಈ ಭಾಗದಲ್ಲೂ ಮರಳು ಕಳ್ಳತನ ಮಾಡಲಾಗಿದೆ ಎಂದರು.

UDP SAND

ನಗರಸಭೆ ಸದಸ್ಯ ರಮೇಶ್ ಕಾಂಚನ್ ಮಾತನಾಡಿ, ಕೊರೊನಾ ವೈರಸ್ ನ ಲಾಕ್ ಡೌನ್ ನ ದುರ್ಲಾಭವನ್ನು ಸಮಿತಿಯ ಸದಸ್ಯರು ಮತ್ತು ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಜಿಲ್ಲೆಯ ಎಲ್ಲ ವಿಚಾರಗಳಿಗೆ ತಕ್ಷಣ ಸ್ಪಂದಿಸುವ ಜಿಲ್ಲಾಧಿಕಾರಿ ಜಿ. ಜಗದೀಶ್ ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಕ್ಷೇತ್ರದ ಸಮಸ್ಯೆಗಳನ್ನು ಕಂಡು ಓಡೋಡಿ ಬರುವ ಶಾಸಕ ರಘುಪತಿ ಭಟ್ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಎಸಿಬಿ ಲೋಕಾಯುಕ್ತ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ಈ ಬಗ್ಗೆ ದೂರು ನೀಡಿದ್ದೇವೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

UDP SAND 1

Share This Article
Leave a Comment

Leave a Reply

Your email address will not be published. Required fields are marked *