ರಾಯಚೂರು: ಸಿಂಧನೂರು ತಾಲೂಕಿನ ಆರ್ ಎಚ್ ಕ್ಯಾಂಪ್- 4 ರ ಗ್ರಾಮಸ್ಥರು ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಗ್ರಾಮದ ಎಲ್ಲಾ ರಸ್ತೆಗಳನ್ನ ಬಂದ್ ಮಾಡಿ ಬೇಲಿ ಹಾಕಿದ್ದಾರೆ. ಒಂದು ರಸ್ತೆಗೆ ಮಾತ್ರ ಚೆಕ್ ಪೋಸ್ಟ್ ಮಾಡಿಕೊಂಡು ಅಗತ್ಯ ವಸ್ತು ಸಾಗಣೆ, ತುರ್ತು ಅಗತ್ಯಗಳಿಗೆ ಮಾತ್ರ ಗ್ರಾಮದ ಜನರನ್ನು ಹೊರಬಿಡುತ್ತಿದ್ದು, ಹೊರಗಿನವರಿಗೆ ಗ್ರಾಮ ಪ್ರವೇಶ ಸಂಪೂರ್ಣ ನಿರ್ಬಂಧಿಸಿದ್ದಾರೆ.
ಬಾಂಗ್ಲಾದೇಶದಿಂದ ವಲಸೆ ಬಂದಿರುವ ಜನ ವಾಸಿಸುತ್ತಿರುವ ಪುನರ್ವಸತಿ ಗ್ರಾಮ ಆರ್ ಎಚ್ ಕ್ಯಾಂಪ್ – 4 ಈಗ ಗ್ರಾಮ ರಕ್ಷಣೆಯ ಕ್ರಮದಿಂದಾಗಿ ಇಡೀ ಜಿಲ್ಲೆಗೆ ಮಾದರಿಯಾಗಿದೆ. ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆ ಚರ್ಚಿಸಿ ಟಾಸ್ಕ್ ಫೋರ್ಸ್ ರಚಿಸಿ “ನಮ್ಮ ಊರು ಕಾಯುವ, ನಮ್ಮ ಜನರ ಉಳಿಸುವ” ಘೋಷಣೆಯೊಂದಿಗೆ ಗ್ರಾಮಸ್ಥರೇ ಅವರ ಗ್ರಾಮಗಳನ್ನ ರಕ್ಷಿಸಿಕೊಳ್ಳಲು ಮನವಿ ಮಾಡಿದ್ದರು. ಇದಕ್ಕೆ ಸಹಕರಿಸಿರುವ ಆರ್ ಎಚ್ ಕ್ಯಾಂಪ್ ಜನ ತಮ್ಮ ಗ್ರಾಮಕ್ಕೆ ಸ್ವಯಂ ನಿರ್ಬಂಧ ಹೇರಿಕೊಂಡಿದ್ದಾರೆ.
ಲಾಕ್‍ಡೌನ್ ಇರುವುದರಿಂದ ಜನರಿಗೆ ಕೆಲಸವೂ ಇಲ್ಲ ,ಇದರಿಂದ ಗ್ರಾಮದ ಜನರಿಗೆ ತೊಂದರೆಯಾಗಬಾರದು ಅಂತ ಜನಕಲ್ಯಾಣ ಸಂಸ್ಥೆ ಇದೇ ವೇಳೆ ಆಹಾರ ಕಿಟ್ ವಿತರಣೆ ಮಾಡಿದೆ. ಜೊತೆಗೆ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತೆ ಅನ್ನೋ ಎಚ್ಚರಿಕೆ ಇರುವುದರಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ತಲುಪಿಸುವ ನಿಟ್ಟಿನಲ್ಲಿ ಆರ್ ಎಚ್ ಕ್ಯಾಂಪ್ ಗ್ರಾಮಸ್ಥರಿಗೆ ಆಹಾರ ಕಿಟ್‍ಗಳನ್ನು ನೀಡುತ್ತಿದ್ದೇವೆ ಅಂತ ಜನಕಲ್ಯಾಣ ಸಂಸ್ಥೆ ಅಧ್ಯಕ್ಷ ಪ್ರಸೇನ್ ರಫ್ತಾನ್ ಹೇಳಿದ್ದಾರೆ.