ನವದೆಹಲಿ: ಭಾರತ್ ಬಯೋಟಿಕ್ ಕಂಪನಿ ಕೋವಿಡ್ – 19ಗೆ ಕಂಡು ಹಿಡಿದ ‘ಕೊವಾಕ್ಸಿನ್ʼ ಲಸಿಕೆಯ ಮಾನವ ಪ್ರಯೋಗ ಇಂದಿನಿಂದ ಹರ್ಯಾಣದಲ್ಲಿ ಆರಂಭವಾಗಿದೆ.
ಹರ್ಯಾಣ ಗೃಹ ಮತ್ತು ವಿಜ್ಞಾನ, ತಂತ್ರಜ್ಞಾನ ಸಚಿವರಾಗಿರುವ ಅನಿಲ್ ವಿಜಿ ಟ್ವೀಟ್ ಮಾಡಿ ಈ ವಿಚಾರವನ್ನು ತಿಳಿಸಿದ್ದಾರೆ. ಕೊವಾಕ್ಸಿನ್ ಮಾನವ ಪ್ರಯೋಗವನ್ನು ರೊಹ್ಟಕ್‌ನಲ್ಲಿರುವ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಇಂದು ಆರಂಭಿಸಲಾಯಿತು. ನೊಂದಾಯಿಸಿಕೊಂಡ ಮೂರು ಮಂದಿಯ ಮೇಲೆ ಪ್ರಯೋಗ ನಡೆದಿದೆ. ಲಸಿಕೆ ಅತ್ಯುತ್ತಮವಾಗಿದ್ದು ಎಲ್ಲರೂ ಸಹಿಸಿಕೊಂಡಿದ್ದಾರೆ. ಯಾವುದೇ ಅಡ್ಡ ಪರಿಣಾಮ ಉಂಟಾಗಿಲ್ಲ ಎಂದು ಬರೆದುಕೊಂಡಿದ್ದಾರೆ.
Advertisement
Human trial with Corona vaccine (COVAXIN) of Bharat Biotech started at PGI Rohtak today. Three subjects were enrolled today. All have tolerated the vaccine very well. There were no adverse efforts.
— ANIL VIJ MINISTER HARYANA (@anilvijminister) July 17, 2020
Advertisement
ದೇಶದಲ್ಲಿ ಏಳು ಕಂಪನಿಗಳು ಕೊರೋನಾ ವಿರುದ್ಧದ ಲಸಿಕೆಗಳು ಅಭಿವೃದ್ಧಿ ಮಾಡಲು ಮುಂದಾಗುತ್ತಿದ್ದು, ಮಾನವ ಪ್ರಯೋಗಕ್ಕಾಗಿ ಎರಡು ಲಸಿಕೆಗಳು ಅನುಮೋದನೆ ಪಡೆದುಕೊಂಡಿವೆ. ಈ ತಿಂಗಳ ಆರಂಭದಲ್ಲಿ ಅಹಮದಾಬಾದ್ ಮೂಲದ ಜಿಯೋಡಸ್ ಕಾಡಿಲಾ ಸಂಸ್ಥೆ ಕೋವಿಡ್ -19 ಲಸಿಕೆ ಮಾನವ ಪ್ರಯೋಗಕ್ಕಾಗಿ ಔಷಧ ನಿಯಂತ್ರಕರಿಂದ ಅನುಮೋದನೆ ಪಡೆದುಕೊಂಡಿರುವುದಾಗಿ ತಿಳಿಸಿತ್ತು.
Advertisement
ಹೈದರಾಬಾದ್‌ನ ಭಾರತ್ ಬಯೋಟಿಕ್ ಕಂಪನಿ ʼಕೊವಾಕ್ಸಿನ್ʼ ಹೆಸರಿನಲ್ಲಿ ಲಸಿಕೆ ಕಂಡು ಹಿಡಿದಿದೆ. ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಮತ್ತು ರಾಷ್ಟ್ರೀಯ ವೈರಾಲಜಿ ಇನ್‌ಸ್ಟಿಟ್ಯೂಟ್(ಎನ್‌ಐವಿ) ಸಹಭಾಗಿತ್ವದಲ್ಲಿ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.
Advertisement
ಕೇಂದ್ರ ಔಷಧಿಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆ(ಸಿಡಿಎಸ್‌ಸಿಒ) ಡಿಜಿಸಿಐ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಲಸಿಕೆ ಪ್ರಯೋಗಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಜುಲೈನಲ್ಲಿ ಭಾರತಾದ್ಯಂತ ಮನುಷ್ಯರ ಮೇಲೆ ಟ್ರಯಲ್ ನಡೆಯಲಿದೆ.
ಎರಡು ಹಂತರದಲ್ಲಿ ಕೊವಾಕ್ಸಿನ್ ಪ್ರಯೋಗ ನಡೆಯಲಿದೆ. ಒಟ್ಟು 1,100 ಮಂದಿಯ ಮೇಲೆ ಪ್ರಯೋಗ ನಡೆಯಲಿದ್ದು, ಮೊದಲ ಹಂತದಲ್ಲಿ 375 ಮಂದಿಗೆ ಲಸಿಕೆ ನೀಡಲಾಗುತ್ತದೆ. ಇವರಿಗೆ ಲಸಿಕೆ ನೀಡಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿದು ನಂತರ ಎರಡನೇ ಹಂತದಲ್ಲಿ 750 ಮಂದಿಗೆ ಲಸಿಕೆ ನೀಡಲಾಗುತ್ತದೆ.
ಕ್ಲಿನಿಕಲ್ ಟ್ರಯಲ್‌ಗೂ ಮೊದಲು ಪ್ರಿ- ಕ್ಲಿನಿಕಲ್ ಅಧ್ಯಯನ, ಸುರಕ್ಷತೆ, ದೇಹದ ಭಾಗಗಳ ಮೇಲಾಗುವ ಪರಿಣಾಮದ ಬಗ್ಗೆ ಸಮಗ್ರ ಅಧ್ಯಯನ ವರದಿ ನೀಡಿದ ಬಳಿಕ ಕೇಂದ್ರ ಸರ್ಕಾರ ಲಸಿಕೆ ಪ್ರಯೋಗಕ್ಕೆ ಅನುಮತಿ ನೀಡಿದೆ.
ಭಾರತ್ ಬಯೋಟಿಕ್ ಕಂಪನಿಯ ಆಡಳಿತ ನಿರ್ದೇಶಕ ಕೃಷ್ಣ ಪ್ರತಿಕ್ರಿಯಿಸಿ, ಕೊವಾಕ್ಸಿನ್ ದೇಶದ ಮೊದಲ ಕೋವಿಡ್ 19 ಔಷಧಿ ಎಂದು ಹೇಳಲು ಬಹಳ ಹೆಮ್ಮೆ ಆಗುತ್ತದೆ ಎಂದು ತಿಳಿಸಿದ್ದಾರೆ.
ಬಹುತೇಕ ದೇಶಗಳು ತಮ್ಮಲ್ಲಿನ ಲಸಿಕೆಗಳು ಪ್ರಾಯೋಗಿಕ ಮಟ್ಟದಲ್ಲಿ ಅಂತಿಮ ಹಂತ ತಲುಪಿವೆ ಎಂದು ಹೇಳಿಕೊಳ್ಳುತ್ತಿವೆ. ಈ ಲಸಿಕೆ ಅಭಿವೃದ್ಧಿ ಕಾರ್ಯದಲ್ಲಿ ಭಾರತವೂ ಮುಂಚೂಣಿಯಲ್ಲಿದ್ದು ಜಾಗತಿಕ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಐಸಿಎಂಆರ್ ಹೇಳಿದೆ.