ಹಾಸನ: ತಂದೆ ಹಾಗೂ ತಾಯಿ ಇಬ್ಬರು ಸೇರಿ ಸ್ವಂತ ಮಗುವನ್ನೇ ಕೊಂದು ಶವವನ್ನು ಕಾಫಿತೋಟದಲ್ಲಿ ಹೂತಿರುವ ಅನುಮಾನದ ಮೇಲೆ ಮಗುವಿನ ಮೃತದೇಹ ಹೊರತೆಗೆದು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಜಿಲ್ಲೆಯ ಆಲೂರು ತಾಲೂಕಿನ, ಕೆ.ಹೊಸಕೋಟೆ ಹೋಬಳಿಯ ಕಾಡ್ಲೂರು ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಕೂಲಿ ಕೆಲಸಕ್ಕೆಂದು ಅಸ್ಸಾಂನಿಂದ ತಾಲೂಕಿನ ಕೆ.ಹೊಸಕೋಟೆ ಹೋಬಳಿಗೆ ಆಗಮಿಸಿದ್ದ ಕೂಲಿಕಾರ್ಮಿಕರ ಕುಟುಂಬಸ್ಥರಿಂದ ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ. ಕೆಲ ದಿನಗಳ ಹಿಂದೆ ಪತಿ, ಪತ್ನಿ ನಡುವೆ ಕೌಟುಂಬಿಕ ಕಾರಣಕ್ಕೆ ಜಗಳ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಮಗುವನ್ನು ಹೊಡೆದು ಸಾಯಿಸಿ ಶವವನ್ನು ಹೂತು ಹಾಕಲಾಗಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಆದರೆ ಮಗು ಅನಾರೋಗ್ಯದಿಂದಾಗಿ ಮೃತಪಟ್ಟಿದೆ ಎಂಬುದು ಪೋಷಕರ ವಾದವಾಗಿದೆ. ಇದನ್ನೂ ಓದಿ: ಹತ್ತು ಲಕ್ಷ ಹಣದೊಂದಿಗೆ ಸುದ್ದಿಗೋಷ್ಠಿ ನಡೆಸಿದ ಹೆಚ್‍ಡಿ.ರೇವಣ್ಣ, ಶಿವಲಿಂಗೇಗೌಡ
ಈ ಕುರಿತು ಸ್ಥಳೀಯರೊಬ್ಬರು ನೀಡಿದ ದೂರಿನ ಮೇರೆಗೆ ಒಂದೂವರೆ ವರ್ಷದ ಗಂಡು ಮಗುವಿನ ಮೃತದೇಹ ಹೊರತೆಗೆದು ಪರಿಶೀಲನೆ ನಡೆಸಲಾಗುತ್ತಿದೆ. ಉಪವಿಭಾಗಾಧಿಕಾರಿ ಮಾರ್ಗದರ್ಶನ ದಲ್ಲಿ ಸ್ಥಳಕ್ಕೆ ಭೇಟಿ ನೀಡಿರುವ ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳ ತಂಡ ಹೂತಿರುವ ಶವವನ್ನು ಹೊರ ತೆಗೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.