– ಜನರ ಕಷ್ಟ ನೋಡಿಯೂ ಕಣ್ಮುಚ್ಚಿ ಕುಳಿತ ಅಧಿಕಾರಿಗಳು, ಜನಪ್ರತಿನಿಧಿಗಳು
ಚಾಮರಾಜನಗರ: ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಶವಸಂಸ್ಕಾರಕ್ಕೆ ಸ್ಮಶಾನ ಇಲ್ಲ. ಅಂತ್ಯ ಸಂಸ್ಕಾರ ಮಾಡಬೇಕೆಂದರೆ ಶವ ಹೊತ್ತು ನದಿ ದಾಟಿ, ಅಲ್ಲಿರುವ ಜಮೀನುಗಳಲ್ಲೇ ಹೆಣ ಹೂಳಬೇಕು. ಇದು ಇಂದು ನಿನ್ನೆಯ ಸಮಸ್ಯೆಯಲ್ಲ ವರ್ಷಗಟ್ಟಲೆ ಗ್ರಾಮಸ್ಥರು ಪಡುತ್ತಿರುವ ಕಷ್ಟ.
Advertisement
ಜಿಲ್ಲೆಯ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಇಂತಹ ಗಂಭೀರ ಸಮಸ್ಯೆ ಇದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನದಿ ದಾಟಲು ಇತ್ತೀಚೆಗೆ ಗ್ರಾಮಸ್ಥರೇ ಮರದ ಹಲಗೆಗಳ ಸೇತುವೆ ನಿರ್ಮಿಸಿಕೊಂಡಿದ್ದಾರೆ. ಹೆಣ ಹೊರುವವರು ಜೀವ ಕೈಯಲ್ಲಿ ಹಿಡಿದು ಈ ಹಲಗೆಗಳ ಸೇತುವೆ ಮೇಲೆ ಸಾಗಬೇಕು ಶವ ಹೊತ್ತೊಯ್ಯುವಾಗ ಸ್ವಲ್ಪ ಯಾಮಾರಿದರು ಅಪಾಯ ತಪ್ಪಿದ್ದಲ್ಲ.
Advertisement
Advertisement
ಗ್ರಾಮದ ಸರ್ವೇ ನಂಬರ್ 887 ಹಾಗೂ 888/1 ರಲ್ಲಿ ವಿವಿಧ ಸಮುದಾಯಗಳ ಸ್ಮಶಾನಕ್ಕೆ 7 ಎಕರೆ 16 ಗುಂಟೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಆದರೆ ಕೆಲ ಖಾಸಗಿ ವ್ಯಕ್ತಿಗಳು ಇದು ತಮಗೆ ಸೇರಬೇಕೆಂದು ನ್ಯಾಯಾಲಯ ಮೆಟ್ಟಿಲೇರಿದ್ದು, ವಿಚಾರಣೆ ನಡೆಯುತ್ತಿದೆ. ಆದರೆ ನ್ಯಾಯಾಲಯಕ್ಕೆ ಸಮರ್ಪಕ ದಾಖಲೆಗಳನ್ನು ಒದಗಿಸಿ ತ್ವರಿತಗತಿಯಲ್ಲಿ ವಿವಾದ ಬಗೆಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇದರ ಪರಿಣಾಮ ಶವಸಂಸ್ಕಾರಕ್ಕೆ ಜಾಗವಿಲ್ಲದೆ ಗ್ರಾಮಸ್ಥರು ಶವ ಹೊತ್ತು ನದಿದಾಟಲು ಹೆಣಗಾಟ ನಡೆಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮೂಲತಃ ಇದೇ ಗ್ರಾಮದವರು. ಇವರೂ ಈ ಸಮಸ್ಯೆಗೆ ಮುಕ್ತಿ ಕಾಣಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.