– ಘಟನೆಯಲ್ಲಿ ಓರ್ವ ಸಾವು, ಇಬ್ಬರಿಗೆ ತೀವ್ರ ಗಾಯ
ಹಾಸನ: ಹೊಳೆನರಸೀಪುರದ ಚಾಕೇನಹಳ್ಳಿಯಲ್ಲಿ ಸ್ಪೋಟಕ ದುರ್ಘಟನೆ ಪ್ರಕರಣ ನಡೆದ ಸ್ಥಳಕ್ಕೆ ಇಂದು ಉಸ್ತುವಾರಿ ಸಚಿವ ಗೋಪಾಲಯ್ಯ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಮಾಹಿತಿ ಪಡೆದ ಸಚಿವರು ಹಾಗೂ ಶಾಸಕರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಬರವಸೆ ನೀಡಿದರು.
ಚಾಕೇನಹಳ್ಳಿಯಲ್ಲಿ ಭಾನುವಾರ ಸ್ಫೋಟಕ ತುಂಬಿದ ಗೋಡೌನ್ ಬಳಿ ಸ್ಫೋಟ ಸಂಭವಿಸಿತ್ತು. ಪ್ರಕರಣದಲ್ಲಿ ಸಂಪತ್ ಸಾವನ್ನಪ್ಪಿ, ನಟರಾಜ್ ಹಾಗೂ ರವಿ ಗಂಭೀರ ಸ್ಥಿತಿ ತಲುಪಿದ್ದಾರೆ. ಇಂದು ಈ ಘಟನಾ ಸ್ಥಳಕ್ಕೆ ಹಾಸನ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸ್ಪೋಟಕ ಗೋಡೌನ್ ದುರ್ಗಾಂಬಾ ಎಂಟರ್ ಪ್ರೈಸಸ್ ಹೆಸರಿನಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.
ಪರಿಶೀಲನೆ ಬಳಿಕ ಮಾತನಾಡಿದ ಪ್ರಜ್ವಲ್ ರೇವಣ್ಣ, ಸ್ಫೋಟಕದ ಗೋಡೌನ್ ನ್ನು ಬೇರೆಡೆ ಸ್ಥಳಾಂತರಿಸಬೇಕು. ಹೊಲ, ಹಳ್ಳಿ ಸಮೀಪ ಇರುವ ಕಾರಣ ಲೈಸೆನ್ಸ್ ಇದ್ದರೂ ಇಂತಹ ಸ್ಫೋಟಕ ಗೋಡೌನ್ ಇಲ್ಲಿ ಇರುವುದು ಸೂಕ್ತ ಅಲ್ಲ. ಘಟನೆ ಹೇಗೆ ನಡೆದಿದೆ ಎನ್ನುವ ಬಗ್ಗೆ ಈಗಲೇ ಮಾತನಾಡುವುದು ಸೂಕ್ತ ಅಲ್ಲ. ಏನೇ ಆದರೂ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಸ್ಫೋಟಕ ಗೋಡೌನ್ ಮಾಲೀಕ ನಾಗೇಶ್ ನಾಪತ್ತೆಯಾಗಿದ್ದಾನೆ ಎಂದು ಸಂಸದ ಪ್ರಜ್ವಲ್ ಹೇಳಿದರು.
ಇಲ್ಲಿ ಸ್ಫೋಟಕ ಗೋಡೌನ್ ಇರೋದೆ ನನಗೆ ತಿಳಿದಿರಲಿಲ್ಲ. ಕೆಲವಡೆ 30 ಅಡಿ ವರೆಗೆ ರಿಗ್ ತೋಡಿ ಸ್ಫೋಟಕ ಇಡುತ್ತಾರೆ. ಈ ಹಿಂದೆ ಅಧಿಕಾರಿಗಳ ಗಮನಕ್ಕೆ ತಂದಿದ್ದೆ. ಎಲ್ಲ ಕಲ್ಲು ಕ್ವಾರಿಗಳ ಡ್ರೋನ್ ಸರ್ವೇ ನಡೆಯಬೇಂದು ಪತ್ರ ಕೂಡ ಬರೆದಿದ್ದೇನೆ. ನನ್ನ ಕ್ಷೇತ್ರದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಮೃತರ ಕುಟುಂಬಕ್ಕೆ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ಪ್ರಕರಣದ ನಂತರ ಜಿಲೆಟಿನ್ ಸಂಗ್ರಹ ಗೋಡೌನ್ ಮಾಲೀಕ ನಾಗೇಶ್ ನಾಪತ್ತೆಯಾಗಿದ್ದಾನೆ. ತಮಿಳುನಾಡಿನಿಂದ ಇಲ್ಲಿಗೆ ಸ್ಪೋಟಕ ತರಲಾಗಿದ್ದು, ರಸೀದಿಗಳು ಇವೆ ಎಂದು ಸಚಿವರು ಅಧಿಕೃತ ಹೇಳಿಕೆ ನೀಡಿದ್ದಾರೆ. ಆದರೆ ಡಿಟೋನೇಟರ್ ಸ್ಫೋಟದಿಂದಲೇ ಈಘಟನೆ ನಡೆದಿದ್ದು, ಈ ಸ್ಪೋಟಕಗಳನ್ನು ಸಾಗಿಸುವ ಕ್ರಮದಲ್ಲಿ ತಪ್ಪಾಗಿರೋದು ಕಂಡುಬಂದಿದೆ. ಯಾರೇ ಆದರೂ ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮಾಹಿತಿ ನೀಡಿದ್ದಾರೆ.
ಈ ಸ್ಫೋಟಕ ಗೋಡೌನ್ ಗೆ ಲೈಸೆನ್ಸ್ ಇದ್ದರೂ ಜಿಲೆಟಿನ್ ಸಾಗಿಸುವಾಗ ತೆಗೆದುಕೊಳ್ಳಬೇಕಾದ ಜಾಗ್ರತಾ ಕ್ರಮ ವಹಿಸದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಘಟನೆಯಲ್ಲಿ ತೀವ್ರಗಾಯಗೊಂಡ ರವಿ ಹಾಗೂ ನಟರಾಜ್ ಕೂಡ ಜೀವನ್ಮರಣ ಹೋರಾಟದಲ್ಲಿದ್ದಾರೆ.