ಕಲಬುರಗಿ: ನಗರದಲ್ಲಿ ಬೈಕ್‍ಗಳನ್ನು ಕದ್ದು ಐಷಾರಾಮಿ ಜೀವನ ನಡೆಸುತ್ತಿದ್ದ 4 ಮಂದಿ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಅದರಲ್ಲಿಯೂ ಆರೋಪಿಗಳು ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್‍ಗನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡಿರುವುದು ವಿಶೇಷ.
ವಿಶ್ವನಾಥ್, ಮಲ್ಲಿಕಾರ್ಜುನ್, ಭಗವಂತ್, ಗಜಾನನ ಬಂಧಿತ ಆರೋಪಿಗಳು. ಇವರು ಕಲಬುರಗಿ ನಗರದ ನಿವಾಸಿಗಳಾಗಿದ್ದಾರೆ. ಈ ನಾಲ್ವರು ಒಂದೊಂದು ಕಡೆ ಕಾರ್ಯನಿರ್ವಹಿಸುತ್ತಿದ್ದು, ಆರೋಪಿ ವಿಶ್ವನಾಥ್ ಅಪಾರ್ಟ್‍ಮೆಂಟ್‍ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದನು ಹಾಗೂ ಗಜಾನನ್ ರೈಲ್ವೆ ಪಾರ್ಕಿಂಗ್ ಸ್ಲಾಟ್‍ನಲ್ಲಿ ಕೆಲಸ ಮಾಡಿಕೊಂಡಿದ್ದನು. ಇವರೆಲ್ಲರು ತಾವು ಕೆಲಸ ಮಾಡುವ ಸ್ಥಳದಲ್ಲಿ ಪಾರ್ಕ್ ಮಾಡಿರುವ ಬೈಕ್‍ಗಳನ್ನ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದರು.
ಈ ನಾಲ್ಕು ಜನರಲ್ಲಿ ವಿಶ್ವನಾಥ್, ಮಲ್ಲಿಕಾರ್ಜುನ್, ಭಗವಂತ್ ಮೂರು ಜನರು ಗ್ಯಾಂಗ್ ಮಾಡಿಕೊಂಡು ನಗರದ ಸಿಲ್ವರ್ ಕಲರ್ ಹೀರೋ ಹೊಂಡಾ ಸ್ಪೆಲೆಂಡರ್ ಬೈಕ್‍ಗಳನ್ನೇ ಹೆಚ್ಚಾಗಿ ಕಳ್ಳತನ ಮಾಡುತ್ತಿದ್ದರು. ಈ ಹೀರೋ ಹೊಂಡಾ ಬೈಕ್‍ಗಳ ಕೀಗಳನ್ನು ಕ್ಷಣಾರ್ಧದಲ್ಲಿ ಮುರಿದು ಎಸ್ಕೇಪ್ ಮಾಡುವ ಕಲೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದರು.
ಮತ್ತೊಂದು ಕಡೆ ಗಜಾನನ ತನಗೆ ಯಾವ ಬೈಕ್ ಇಷ್ಟ ಆಗುತ್ತದೆಯೋ ಆ ಬೈಕ್‍ನನ್ನು ಕಳ್ಳತನ ಮಾಡಿ ಒಂದೆರೆಡು ದಿನ ನಂಬರ್ ಪ್ಲೇಟ್ ಬದಲಾವಣೆ ಮಾಡಿ ಓಡಾಡಿ, ಬಳಿಕ ಕದ್ದ ಗಾಡಿಗಳನ್ನು ಎಲ್ಲರು ಬೀದರ್ ಯಾದಗಿರಿ ಸೇರಿದಂತೆ ಹೊರ ಜಿಲ್ಲೆಗಳಿಗೆ ಹತ್ತರಿಂದ ಹದಿನೈದು ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು.
ಈಗ ಪೊಲೀಸರು ಬೀಸಿದ ಬಲೆಗೆ ಇದೀಗ ನಾಲ್ವರು ಕೂಡ ಅಂದರ್ ಆಗಿದ್ದಾರೆ. ಪೊಲೀಸರು ಅರೋಪಿಗಳಿಂದ ಸುಮಾರು 43 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.