ಮ್ಯಾಡ್ರಿಡ್: ಮಂಗಳವಾರ ಬೆಳಗಿನ ಜಾವದಿಂದ ಸ್ಪೇನ್‌ನಾದ್ಯಂತ (Spain) ನೆಟ್‌ವರ್ಕ್‌ನಲ್ಲಿ ವ್ಯತ್ಯಯ ಉಂಟಾಗಿದ್ದು, ಮೊಬೈಲ್ ಕರೆ ಹಾಗೂ ಇಂಟರ್ನೆಟ್ ಇಲ್ಲದೇ ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು.
ಕಳೆದ ಎರಡು ವಾರಗಳ ಹಿಂದೆ ಸ್ಪೇನ್ ಹಾಗೂ ಪೋರ್ಚುಗಲ್ ಸೇರಿದಂತೆ ಮೂರು ಯುರೋಪಿಯನ್ ದೇಶಗಳಲ್ಲಿ ವಿದ್ಯುತ್ ಕಡಿತಗೊಂಡು ಸಮಸ್ಯೆ ಎದುರಿಸುವಂತಾಗಿತ್ತು. ಇದೀಗ ನೆಟ್‌ವರ್ಕ್ ಸಮಸ್ಯೆ ಉಂಟಾಗಿದೆ. ಇದರಿಂದಾಗಿ ಮೊವಿಸ್ಟಾರ್, ಆರೆಂಜ್, ವೊಡಾಫೋನ್, ಡಿಜಿಮೊಬಿಲ್ ಮತ್ತು ಔ2 ಸೇರಿದಂತೆ ಪ್ರಮುಖ ಟೆಲಿಕಾಂ ನೆಟ್‌ವರ್ಕ್‌ಗಳು ಸ್ಥಗಿತಗೊಂಡಿದ್ದವು.ಇದನ್ನೂ ಓದಿ: ಬೆಂಗಳೂರು ರಣಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಮಂಗಳವಾರ ಬೆಳಿಗ್ಗೆ 2 ಗಂಟೆ ಸುಮಾರಿಗೆ ಪ್ರಾರಂಭವಾದ ಈ ಸಮಸ್ಯೆ ನಸುಕಿನ ಜಾವ 5 ಗಂಟೆಯ ಹೊತ್ತಿಗೆ ತೀರಾ ಹದಗೆಟ್ಟಿತ್ತು. ಮ್ಯಾಡ್ರಿಡ್, ಬಾರ್ಸಿಲೋನಾ, ಸೆವಿಲ್ಲೆ, ವೇಲೆನ್ಸಿಯಾ, ಬಿಲ್ಬಾವೊ ಮತ್ತು ಮಲಗಾ ಮುಂತಾದ ಪ್ರಮುಖ ನಗರಗಳಲ್ಲಿ ಸೇವೆಗಳಿಗೆ ಅಡಚಣೆ ಉಂಟಾಯಿತು. ಕರೆ, ಮೆಸೇಜ್ ಸೇರಿದಂತೆ ಮೊಬೈಲ್ ಡೇಟಾ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರ ಪರಿಣಾಮ ತುರ್ತು ಸೇವೆಗಳ ಸಂದರ್ಭದಲ್ಲಿ ಪರದಾಡುವಂತಾಗಿತ್ತು.
ಇದರಿಂದಾಗಿ ತುರ್ತು ಸೇವೆಗಳ ಮೇಲೆಯೂ ಗಂಭೀರ ಪರಿಣಾಮ ಉಂಟಾಗಿ, ಅರಾಗಾನ್, ಎಕ್ಸ್ಟ್ರೀಮದುರಾ, ಬಾಸ್ಕ್ ಕಂಟ್ರಿ ಮತ್ತು ವೇಲೆನ್ಸಿಯಾ ಸಮುದಾಯ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ತುರ್ತು ಸಂಖ್ಯೆ 112ಗೆ ಕರೆಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅಧಿಕಾರಿಗಳು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪರ್ಯಾಯ ಸಂಪರ್ಕ ಸಂಖ್ಯೆಯನ್ನು ನೀಡುವ ಮೂಲಕ ಪ್ರತಿಕ್ರಿಯಿಸಿದರು. ಕೆಲವು ಸೇವೆಗಳು ಬೆಳಿಗ್ಗೆ ನಂತರ ಕ್ರಮೇಣ ಮೊದಲಿನಂತೆ ಕಾರ್ಯಾರಂಭಿಸಿದವು.
ಸ್ಪ್ಯಾನಿಷ್ ಮಾಧ್ಯಮಗಳ ಪ್ರಕಾರ, ದೇಶದ 2ನೇ ಅತಿದೊಡ್ಡ ಕಂಪನಿ ಮತ್ತು ಸ್ಪೇನ್‌ನ ಹೆಚ್ಚಿನ ಮೊಬೈಲ್ ಮೂಲಸೌಕರ್ಯಕ್ಕೆ ಪ್ರಮುಖ ಆಪರೇಟರ್ ಆಗಿರುವ ಟೆಲಿಫೋನಿಕಾ ನೆಟ್‌ವರ್ಕ್ ಅಪ್‌ಗ್ರೇಡ್ ಸಮಯದಲ್ಲಿ ತಾಂತ್ರಿಕ ದೋಷದಿಂದಾಗಿ ಈ ಸಮಸ್ಯೆ ಉಂಟಾಗಿತ್ತು ಎಂದು ವರದಿ ಮಾಡಿವೆ.
ಇದಕ್ಕೂ ಮುನ್ನ ಏ.28 ರಂದು ಸ್ಪೇನ್, ಫ್ರಾನ್ಸ್, ಪೋರ್ಚುಗಲ್ ಹಾಗೂ ದಕ್ಷಿಣ ಫ್ರಾನ್ಸ್‌ನಲ್ಲಿ ಏಕಕಾಲಕ್ಕೆ ವಿದ್ಯುತ್ ಕಡಿತಗೊಂಡು ಲಕ್ಷಾಂತರ ಜನರು ಪರದಾಡುವಂತಾಗಿತ್ತು. ಅಲ್ಲದೇ ವಿದ್ಯುತ್ ಕಡಿತವು ರೈಲು ಸಂಚಾರ ಹಾಗೂ ವಿಮಾನ ಹಾರಾಟದ ಮೇಲೆ ಪರಿಣಾಮ ಬೀರಿತ್ತು.ಇದನ್ನೂ ಓದಿ: ಕೇಂದ್ರ ಗುಪ್ತಚರ ಇಲಾಖೆ ಮುಖ್ಯಸ್ಥರ ಅವಧಿ 1 ವರ್ಷ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ