– ಮಾರಕಾಸ್ತ್ರದಿಂದ ಕತ್ತಿಗೆ, ಬೆನ್ನಿಗೆ ಚುಚ್ಚಿ ಮರ್ಡರ್
ಬಾಗಲಕೋಟೆ: ಸ್ನೇಹಿತನ ಹುಟ್ಟುಹಬ್ಬಕ್ಕೆಂದು ಹೋದ ಯುವಕ ಊರ ಹೊರವಲಯದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ನೀರಲಕೇರಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ಟಂಟಂ ವಾಹನ ಚಾಲಕನಾಗಿದ್ದ ರಂಗಪ್ಪ ಚಂದ್ರಶೇಖರ ದಳವಾಯಿ(22) ಎಂದು ಗುರುತಿಸಲಾಗಿದೆ. ರಂಗಪ್ಪ ಮೊನ್ನೆ ತನ್ನ ಸ್ನೇಹಿತ ಕೃಷ್ಣ ಗೌಡರನ ಹುಟ್ಟುಹಬ್ಬ ಆಚರಿಸಿಲು ಹೋಗಿದ್ದ. ಅಂದು ರಾತ್ರಿ ಮನೆಗೆ ಬಂದಿರಲಿಲ್ಲ. ಆದರೆ ಇಂದು ಗ್ರಾಮದ ಹೊರವಲಯದಲ್ಲಿ ಆತನ ಶವ ಪತ್ತೆಯಾಗಿದೆ. ಮಾರಕಾಸ್ತ್ರದಿಂದ ತಲೆ, ಕುತ್ತಿಗೆ ಮತ್ತು ಬೆನ್ನಿಗೆ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಗುರುವಾರ ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ಸ್ನೇಹಿತನ ಹುಟ್ಟುಹಬ್ಬವಿದೆ ಎಂದು ಮೃತ ರಂಗಪ್ಪ ಹೋಗಿದ್ದಾನೆ. ಆದರೆ ನಂತರ ಆತ ಮನೆಗೆ ಬಂದಿಲ್ಲ. ಮಗನ ಬಗ್ಗೆ ವಿಚಾರಿಸಿದ ಮನೆಯವರು ಎಲ್ಲೋ ಹೋಗಿದ್ದಾನೆ ಎಂದು ಸುಮ್ಮನಾಗಿದ್ದಾರೆ. ಆದರೆ ಇಂದು ಆತನ ಶವ ಪತ್ತೆಯಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ರಂಗಪ್ಪನ ಸ್ನೇಹಿತರನ್ನು ವಿಚಾರಣೆ ಒಳಪಡಿಸಿದ್ದಾರೆ.