ಬೆಂಗಳೂರು: ಯುವತಿಯೊಬ್ಬಳ ಜೊತೆ ಸ್ನೇಹ ಬೆಳೆಸಿಕೊಂಡ ಇಬ್ಬರೂ ಸ್ನೇಹಿತರು ನಂತರ ಆಕೆಯೊಂದಿಗೆ ಸಲುಗೆಯಿಂದಿದ್ದರು. ಇದನ್ನೇ ದುರುಪಯೋಗಪಡಿಸಿಕೊಂಡು ಯುವತಿಯ ನಗ್ನ ಫೋಟೋ ಇರುವುದಾಗಿ ತಿಳಿಸಿ ವೈರಲ್ ಮಾಡುದಾಗಿ ಬೆದರಿಸಿ ಹಣ ಒಡವೆ ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೆ.ಆರ್.ಪುರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯುವತಿಗೆ ಸ್ನೇಹಿತರಿಬ್ಬರು ಪರಿಚಯವಾಗಿದ್ದರು. ನಂತರ ಆಕೆಯ ಮನೆಗೆ ಪದೇ ಪದೇ ಭೇಟಿ ನೀಡಿ ಸ್ನೇಹ ಬೆಳೆಸಿಕೊಂಡಿದ್ದರು. ನಂತರ ಕಾರಣಾಂತರಗಳಿಂದ ಮಾತು ಬಿಟ್ಟು ದೂರವಾಗಿದ್ದರು. ಇದಾದ ಬಳಿಕ 2018ರಲ್ಲಿ ಆಕೆಯ ಸ್ನೇಹಿತ ನನ್ನ ಬಳಿ ನಿನ್ನ ಬೆತ್ತಲೆ ಫೋಟೋಗಳಿವೆ. ನೀನು ನನಗೆ ಹಣ, ಆಭರಣಗಳನ್ನು ಕೊಡದಿದ್ದರೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸುತ್ತಿದ್ದ. ಇದರಿಂದ ಹೆದರಿದ ಯುವತಿ ಮನೆಯಲ್ಲಿದ್ದ 219 ಗ್ರಾಂ ಚಿನ್ನಾಭರಣ, 75 ಸಾವಿರ ರೂಪಾಯಿ ಹಣವನ್ನು ಕೊಟ್ಟಿದ್ದಾಳೆ.
ಇದಾದ ಬಳಿಕ ಮತ್ತೆ ತನ್ನ ಇನ್ನೋರ್ವ ಸ್ನೇಹಿತನಿಗೆ ಫೇಸ್‍ಬುಕ್‍ನಲ್ಲಿ ಪರಿಚಯ ಮಾಡಿಸಿ ಅವನು ಆಕೆಯನ್ನು ರಾಚೇನಹಳ್ಳಿ ಕೆರೆ ಬಳಿ ಕರೆಸಿಕೊಂಡು ಆಕೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದನಂತೆ. ಈ ಘಟನೆ ಬಳಿಕ ಆತನೂ ಕೂಡ ಆಕೆಗೆ ಕರೆ ಮಾಡಿ ನಿನ್ನ ಖಾಸಗಿ ಫೋಟೋ ನನ್ನ ಬಳಿ ಇದೆ ಎಂದು ಬೆದರಿಸಿ ಹಣ ಒಡವೆಗಳನ್ನು ಕೊಡಬೇಕು ಇಲ್ಲದಿದ್ದಲ್ಲಿ ಫೋಟೋ ದುರ್ಬಳಕೆ ಮಾಡುದಾಗಿ ತಿಳಿಸಿದ್ದ. ಇದರಿಂದ ಭಯಭೀತಳಾದ ಯುವತಿ ತನ್ನ ಮಾವನ ಪತ್ನಿಯ ಮಾಂಗಲ್ಯ ಸರ ತಂದು ಕೊಟ್ಟಿದ್ದಳು. ಆದರೂ ಆರೋಪಿಗಳು ತಮ್ಮ ಹಳೇ ಚಾಳಿ ಮುಂದುವರೆಸಿ ಮತ್ತೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಇದರಿಂದ ಬೇಸತ್ತು ಯುವತಿ ತನ್ನ ಸ್ನೇಹಿತರಾದ ದೇವಸಂದ್ರ ಮತ್ತು ಬ್ರಿಜ್ ಭೂಷಣ್ ಯಾದವ್ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.