ಚಿಕ್ಕಮಗಳೂರು: ಹೇಮಾವತಿ ಅಬ್ಬರಕ್ಕೆ ಸೇತುವೆ ಕೊಚ್ಚಿ ಹೋಗಿ ವರ್ಷ ಕಳೆಯಿತು, ಇಲ್ಲಿಯವರೆಗೂ ಸೇತುವೆ ನಿರ್ಮಿಸಿ ಕೊಟ್ಟಿಲ್ಲ. ನಾವೇ ನಿರ್ಮಿಸಿಕೊಂಡಿದ್ದ ಸೇತುವೆ ಕೂಡ ಕೊಚ್ಚಿ ಹೋಗಿದೆ. ಈಗ ಮತ್ತೆ ಭೇಟಿ ಕೊಡ್ತಿದ್ದೀರಾ ಎಂದು ಜಿಲ್ಲೆಯ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆಗೆ ಸ್ಥಳಿಯರು ಕ್ಲಾಸ್ ತೆಗೆದುಕೊಂಡಿದ್ದರು. ಇದರ ಫಲವಾಗಿ ಇದೀಗ ಕಾಮಗಾರಿ ಆರಂಭವಾಗಿದೆ.
ಜನಪ್ರತಿನಿಧಿಗಳಿಗೆ ಸ್ಥಳಿಯರು ರಸ್ತೆ ಮಧ್ಯೆಯೇ ಪಾಠ ಮಾಡಿದ ಫಲವಾಗಿ ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿಯಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣಗೊಳ್ಳುತ್ತಿದೆ. ಕಳೆದ ವರ್ಷದ ಮಳೆ ಅಬ್ಬರಕ್ಕೆ ಬಂಕೇನಹಳ್ಳಿ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿತ್ತು. ಇದರಿಂದ ನಾಲ್ಕೈದು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ನಂತರ ಸ್ಥಳೀಯರೇ ಹೇಮಾವತಿ ನದಿ ಒಡಲಿಗೆ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡಿದ್ದರು. ಆದರೆ ಆಗಸ್ಟ್ ಮೊದಲ ವಾರದ ಮಳೆ-ಗಾಳಿಗೆ ಸ್ಥಳಿಯರೇ ನಿರ್ಮಿಸಿಕೊಂಡಿದ್ದ ಸೇತುವೆ ಕೂಡ ಕೊಚ್ಚಿ ಹೋಗಿತ್ತು.
ಇದರಿಂದ ಸ್ಥಳಿಯರು ಮತ್ತಷ್ಟು ಆತಂಕಕ್ಕೀಡಾಗಿದ್ದರು. ಇದೇ ವೇಳೆ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಕುಮಾರಸ್ವಾಮಿ ಸ್ಥಳ ಪರಿಶೀಲನೆಗೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರು ಪಾಠ ಮಾಡಿದ್ದರು. ಸ್ಥಳೀಯರು ಜನಪ್ರತಿನಧಿಗಳಿಗೆ ತರಾಟೆಗೆ ತೆಗೆದುಕೊಂಡ ಫಲವಾಗಿ ಇಂದು ಬಂಕೇನಹಳ್ಳಿ ಸೇತುವೆಗೆ ತಾತ್ಕಾಲಿಕ ಸೇತುವೆ ನಿರ್ಮಾಣಗೊಳ್ಳುತ್ತಿದೆ. ಕಳೆದ ಬಾರಿ ಸೇತುವೆ ಕೊಚ್ಚಿ ಹೋದಾಗ ಸಚಿವರು, ಅಧಿಕಾರಿಗಳು ಮೇಲಿಂದ ಮೇಲೆ ಭೇಟಿ ಕೊಟ್ಟು ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಒಂದು ವರ್ಷವಾದರೂ ಸೇತುವೆ ನಿರ್ಮಾಣವಾಗಿಲ್ಲ ಎಂದು ಸ್ಥಳೀಯರು ಜನನಾಯಕರಿಗೆ ತರಾಟೆಗೆ ತೆಗೆದುಕೊಂಡಿದ್ದರು.
ಇಂದು ಹೇಮಾವತಿ ನದಿ ಮೈದುಂಬಿ ಹರಿಯುತ್ತಿದೆ. ಇನ್ನೊಂದೆಡೆ ಸೇತುವೆ ನಿರ್ಮಾಣದ ಕಾರ್ಯ ಭರದಿಂದ ಸಾಗಿದೆ. ಇದರಿಂದ ಬಂಕೇನಹಳ್ಳಿ ಹಾಗೂ ನಾಲ್ಕೈದು ಗ್ರಾಮದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಶಾಶ್ವತ ಸೇತುವೆ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.