ಲಂಡನ್: ವಿಶ್ವದ ಅತಿದೊಡ್ಡ ತೈಲ ಕಂಪನಿಯಾಗಿರುವ ಸರ್ಕಾರಿ ಸ್ವಾಮ್ಯದ ಸೌದಿ ಅರಾಮ್ಕೋ ತೈಲ ಘಟಕದ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆದಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದಿಢೀರ್ ಗಗನಕ್ಕೆ ಏರತೊಡಗಿದೆ.
ಇರಾನ್ ಬೆಂಬಲಿತ ಯೆಮೆನ್‌ನ ಹೌತಿ ಪಡೆಗಳು ಭಾನುವಾರ ಸೌದಿ ಅರಾಮ್ಕೊದ ಘಟಕದ ಮೇಲೆ ದಾಳಿ ನಡೆಸಿದೆ. ಪರಿಣಾಮ ಸೋಮವಾರ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 70 ಡಾಲರ್ ಆಗಿದ್ದರೆ ಮಂಗಳವಾರ ಈ ಬೆಲೆ 71 ಡಾಲರ್‌ಗೆ ಏರಿಕೆ ಆಗಿದೆ.
ಕೋವಿಡ್ 19 ಬಳಿಕ ಇದೇ ಮೊದಲ ಬಾರಿಗೆ ಈ ಮಟ್ಟವನ್ನು ತಲುಪಿದ್ದು ಈ ರೀತಿಯ ದಾಳಿಯಿಂದ ಮುಂದಿನ ದಿನಗಳಲ್ಲಿ ಕಚ್ಚಾ ತೈಲದ ಬೆಲೆ ಮತ್ತಷ್ಟು ಏರಿಕೆ ಆಗಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಅಮೆರಿಕದ ಡಬ್ಲ್ಯುಟಿಐ ದರ್ಜೆಯ ಕಚ್ಚಾ ತೈಲ ದರ ಎರಡು ವರ್ಷಗಳಿಗೂ ಹೆಚ್ಚಿನ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
ಕಳೆದ ವರ್ಷ ಪೂರ್ವ ಸೌದಿ ರೇಬಿಯಾದ ಅಬ್ಕೈಕ್ ಮತ್ತು ಖುರೈಸ್‍ನಲ್ಲಿದ್ದ ಸೌದಿ ಅರಾಮ್ಕೋದ ತೈಲ ಘಟಕದ ಮೇಲೆ ಮೇಲೆ ದಾಳಿ ನಡೆಸಲಾಗಿತ್ತು. ಈಗ ಮತ್ತೊಮ್ಮೆ ಹೌತಿ ಪಡೆಗಳು ದಾಳಿ ನಡೆಸಿದೆ. ಇದನ್ನೂ ಓದಿ: ರಿಲಯನ್ಸ್ ಇಂಡಸ್ಟ್ರೀಸ್ ಈಗ ವಿಶ್ವದ ನಂ.2 ಇಂಧನ ಕಂಪನಿ
ಮತ್ತಷ್ಟು ಏರಿಕೆ: ಭಾರತ ಸೇರಿದಂತೆ ವಿಶ್ವದ ಹಲವು ತೈಲ ಆಮದು ಮಾಡುವ ರಾಷ್ಟ್ರಗಳು ತೈಲ ಉತ್ಪಾದನೆ ಮಾಡುವ ಒಪೆಕ್ ರಾಷ್ಟ್ರಗಳಿಗೆ ತೈಲ ಉತ್ಪಾದನೆ ಹೆಚ್ಚು ಮಾಡುವಂತೆ ಮನವಿ ಮಾಡಿದ್ದವು. ಆದರೆ ಈ ಮನವಿಯನ್ನು ಒಪೆಕ್ ರಾಷ್ಟ್ರಗಳು ತಿರಸ್ಕರಿಸಿತ್ತು. ಕೋವಿಡ್ 19 ಲಾಕ್‌ಡೌನ್ ಸಮಯದಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 19 ಡಾಲರ್‌ಗೆ ಇಳಿಕೆಯಾಗಿತ್ತು. ಈ ಸಮಯದಲ್ಲಿ ಭಾರೀ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ರಾಷ್ಟ್ರಗಳು ಸಂಗ್ರಹಿಸಿವೆ. ಸಂಗ್ರಹ ಮಾಡಿರುವ ಕಚ್ಚಾ ತೈಲವನ್ನು ವಿತರಣೆ ಮಾಡಿ ಎಂದು ಸೌದಿ ಅರೇಬಿಯಾ ಭಾರತಕ್ಕೆ ಸೂಚಿಸಿತ್ತು.
ದೇಶದಲ್ಲಿ ಈಗಾಗಲೇ ಪೆಟ್ರೋಲ್, ಡೀಸೆಲ್ ದರಗಳು ಗರಿಷ್ಠ ಮಟ್ಟದಲ್ಲಿವೆ. ಕಚ್ಚಾ ತೈಲ ದರ ನಿರಂತರವಾಗಿ ಏರಿಕೆ ಆಗುತ್ತಿರುವುದರಿಂದ ದೇಶಿ ಮಾರುಕಟ್ಟೆಯಲ್ಲಿ ಇಂಧನ ದರ ಮತ್ತಷ್ಟು ಹೆಚ್ಚಾಗಲಿದೆ.