ಗದಗ: ಫೇಸ್‍ಬುಕ್‍ನಲ್ಲಿ ಪರಿಚಯವಾಗಿ ಶಿಕ್ಷಕಿಯ ಬಳಿ 7 ಲಕ್ಷ ರೂಪಾಯಿಗೂ ಹೆಚ್ಚು ಹಣ ಪಡೆದಿದ್ದ ಮೋಸಗಾರನನ್ನು ಮುಂಡರಗಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಮಾಸೂರ ಕೊಡಮಗ್ಗಿ ಗ್ರಾಮದ ನೇತಾಜಿ ಮದ್ದನೇರ ಬಂಧಿತ ವ್ಯಕ್ತಿ.
ನೇತಾಜಿಗೆ ಫೇಸ್‍ಬುಕ್ ನಲ್ಲಿ ಮುಂಡರಗಿ ಪಟ್ಟಣದ ಖಾಸಗಿ ಶಾಲೆಯ ಶಿಕ್ಷಕಿಯ ಪರಿಚಯ ಆಗುತ್ತದೆ. ಇಬ್ಬರ ಸ್ನೇಹ ಪ್ರೇಮವಾಗಿ ಬದಲಾಗಿತ್ತು. ಒಂದು ಬಾರಿ ಹುಬ್ಬಳ್ಳಿಯಲ್ಲಿಯೂ ಭೇಟಿಯಾಗಿದ್ದಾರೆ. ನೇತಾಜಿ ಸಹ ಮದುವೆ ಮಾಡಿಕೊಳ್ಳುವ ಮಾತು ಸಹ ನೀಡಿದ್ದನು. ಶಿಕ್ಷಕಿ ತನ್ನನ್ನು ಬಲವಾಗಿ ನಂಬುತ್ತಿದ್ದಂತೆ ಅನಾರೋಗ್ಯ ಕಾರಣಗಳನ್ನ ಹೇಳಿ ಹಣ ಪಡೆದಿದ್ದಾನೆ.
ಮದುವೆಯಾಗುವ ಹುಡುಗ ಎಂದು ಸಹೋದ್ಯೋಗಿಗಳ ಬಳಿ ಸಾಲ ಪಡೆದು ಲಕ್ಷ ಲಕ್ಷ ಹಣ ಹಾಕಿದ್ದಾರೆ. ನಂತರ ಕೆಲಸದ ನೆಪಗಳನ್ನು ಹೇಳಿ ಬರೋಬ್ಬರಿ ಏಳು ಲಕ್ಷ ರೂಪಾಯಿಯನ್ನ ಉಪಾಯವಾಗಿ ಪಡೆದುಕೊಂಡಿದ್ದಾನೆ. ಕೆಲ ದಿನಗಳ ಹಿಂದೆ ಶಿಕ್ಷಕಿಗೆ ಅನುಮಾನ ಬಂದು ಹಣ ನೀಡಿಲ್ಲ. ಶಿಕ್ಷಕಿ ಹಣ ನೀಡದಿದ್ದಾಗ, ನೇತಾಜಿ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾನೆ.
ನೇತಾಜಿ ಹಿನ್ನೆಲೆ ಪತ್ತೆ ಮಾಡಿದಾಗ ಇದೇ ರೀತಿ ಮಹಿಳೆಯರಿಗೆ ಮೋಸ ಮಾಡಿರುವ ವಿಚಾರ ಶಿಕ್ಷಕಿಗೆ ತಿಳಿದಿದೆ. ತಾನು ಮೋಸ ಹೋಗಿರುವ ವಿಷಯ ತಿಳಿಯುತ್ತಲೇ ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.