– ಯಾವ ಸಚಿವರೊಂದಿಗೂ ಸಭೆ ಸೇರಿಲ್ಲ
ಹಾಸನ: ಚಿಕ್ಕಮಗಳೂರಿನಲ್ಲಿ ನಾವು ಸಭೆ ಸೇರಿಲ್ಲ ಮಾಧ್ಯಮದವರು ಅರ್ಥ ಮಾಡಿಕೊಳ್ಳಿ ಎಂದು ಜಗದೀಶ್ ಶೆಟ್ಟರ್ ಆಕ್ರೋಶ ಹೊರಹಾಕಿದ್ದಾರೆ.
ಆರ್.ಅಶೋಕ್ ಹುಟ್ಟುಹಬ್ಬದ ಹಿನ್ನೆಲೆ ಕೆಲ ಸಚಿವರು ಚಿಕ್ಕಮಗಳೂರಿನಲ್ಲಿ ಸಭೆ ಸೇರಿದ್ದರು ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಈ ಕುರಿತು ಹಾಸನದಲ್ಲಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದು, ಸೋಮಶೇಖರ್ ಹೇಳಿದ್ರೆ ನಾನು ಸ್ಪಷ್ಟೀಕರಣ ಕೊಡಬೇಕಾ? ಸ್ವತಃ ನಾನೇ ಹೇಳುತ್ತಿದ್ದೇನೆ, ನಾವು ಸಭೆ ಸೇರಿಲ್ಲ ಮಾಧ್ಯಮದವರು ಅರ್ಥ ಮಾಡಿಕೊಳ್ಳಿ ಎಂದು ಜಗದೀಶ್ ಶೆಟ್ಟರ್ ಸಿಡಿಮಿಡಿಗೊಂಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ನಾವು ಸಭೆ ಮಾಡಿದ್ದೇವೆ ಎಂದು ಯಾರು ಹೇಳಿದ್ದು, ನೀವು ಬಂದಿದ್ರಾ ಅಲ್ಲಿ. ಸೋಮಶೇಖರ್ ಒಪ್ಪಿದ್ರೆ ನಾನು ಸಭೆ ಮಾಡಿದ ಹಾಗಾ ಎಂದು ಮರು ಪ್ರಶ್ನೆ ಮಾಡಿದ್ದಾರೆ. ನಾನು ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಪ್ರವಾಸ ಮಾಡಿ ಹಾಸನಕ್ಕೆ ಬಂದಿದ್ದೇನೆ. ಈಗ ಮಾಧ್ಯಮದಲ್ಲಿ ಸೃಷ್ಟಿ ಮಾಡಿದ್ದಕ್ಕೆ ಸ್ಪಷ್ಟೀಕರಣ ಕೊಡುವ ಪರಿಸ್ಥಿತಿ ಬಂದಿದೆ. ಇದು ಬಹಳ ಗಂಭೀರವಾದ ಸಮಸ್ಯೆ. ಇದನ್ನು ಮಾಧ್ಯಮದವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ನಾವು ಚಿಕ್ಕಮಗಳೂರಿಗೆ ಹೋದಾಗ ಮಂತ್ರಿಗಳು ಬರ್ತಾರೆ. ಮೀಟಿಂಗ್ ಮಾಡ್ತಾರೆ. ಅವರು ಅಲ್ಲಿ ಓಡಾಡಿದಾಗ ಅದನ್ನು ಸಭೆ ಅನ್ನೋದಾದ್ರೆ ಹೇಗೆ. ಸಚಿವ ಆರ್.ಅಶೋಕ್ ನಮ್ಮನ್ನು ಭೇಟಿ ಕೂಡ ಆಗಿಲ್ಲ, ಯಾವ ಸಭೆಯೂ ಆಗಿಲ್ಲ. ಯಾವ ಹುಟ್ಟುಹಬ್ಬ ಏನೂ ನನಗೆ ಗೊತ್ತಿಲ್ಲ. ಏನೂ ಅರ್ಥ ಆಗುತ್ತಿಲ್ಲ. ಎಲ್ಲೂ ಓಡಾಡದೇ ಮನೇಲೆ ಇರಬೇಕಾ ಎಂದು ಸಚಿವ ಜಗದೀಶ್ ಶೆಟ್ಟರ್ ಮಾಧ್ಯಮದವರ ವಿರುದ್ಧವೇ ಕಿಡಿಕಾರಿದ್ದಾರೆ.