ಮೈಸೂರು: ಸೋಜುಗದ ಸೂಜು ಮಲ್ಲಿಗೆ ಗಾಯಕಿ ಅನನ್ಯ ಭಟ್ ತಂದೆಯನ್ನ ಮೈಸೂರಿನಲ್ಲಿ ಬಂಧಿಸಲಾಗಿದೆ.
ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಕೊಲೆ ಪ್ರಕರಣದಲ್ಲಿ ವಿಶ್ವನಾಥ್ ಭಟ್ (52) ಬಂಧನವಾಗಿದೆ. 7 ಲಕ್ಷಕ್ಕೆ ಕೊಲೆಗೆ ಸುಪಾರಿ ನೀಡಿದ್ದಕ್ಕೆ ಆರೋಪಕ್ಕೆ ಬಲವಾದ ಸಾಕ್ಷ್ಯಗಳು ಸಿಕ್ಕಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ತಂದೆಯಿಂದ ದೂರವಾಗಿ ಎರಡು ವರ್ಷಗಳಿಂದ ಅನನ್ಯ ಭಟ್ ತಾಯಿ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ.
ಏನಿದು ಪ್ರಕರಣ?: ಸೆಪ್ಟೆಂಬರ್ 20, 2020ರಂದು ಮೈಸೂರಿನ ನಿವೇದಿತಾ ನಗರದಲ್ಲಿ ಪರಶಿವಮೂರ್ತಿ ಕೊಲೆಯಾಗಿತ್ತು. ಘಟನೆಗೆ ಸಂಬಂಧ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಕೊಲೆಗೆ ವಿಶ್ವನಾಥ್ ಭಟ್ ಸುಪಾರಿ ನೀಡಿರುವ ವಿಷಯ ಬೆಳಕಿಗೆ ಬಂದಿದೆ. ಈ ಕೊಲೆಗೆ ವಿಶ್ವನಾಥ್ ಭಟ್ ಗೆ ಗೆಳೆಯ ಸಿದ್ದರಾಜು ಸಾಥ್ ನೀಡಿದ್ದನು.
ಸುಪಾರಿ ನೀಡಿದ್ಯಾಕೆ? : ವಿಶ್ವನಾಥ್ ಭಟ್ ಮತ್ತು ಪರಶಿವಮೂರ್ತಿ ಸಹದ್ಯೋಗಿಗಳು. ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿಯಾಗಿದ್ದ ಪರಶಿವಮೂರ್ತಿ ಪ್ರತಿ ತಿಂಗಳು ಕಮಿಷನ್ ಗಾಗಿ ಪೀಡಿಸುತ್ತಿದ್ದನು. ಜೊತೆಗೆ ಅವಾಚ್ಯ ಪದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದನು ಎಂದು ತಿಳಿದು ಬಂದಿದೆ. ಪರಶಿವಮೂರ್ತಿಯ ಕಿರುಕುಳದಿಂದ ಬೇಸತ್ತ ವಿಶ್ವನಾಥ್ ಭಟ್ ಕೊಲೆಗೆ ಸುಪಾರಿ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.