ನವದೆಹಲಿ: ಕೊರೊನಾ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಈ ಬಾರಿ ಭಾರತದಿಂದ ಹಜ್ ಯಾತ್ರೆ ರದ್ದು ಮಾಡಲಾಗಿದೆ ಎಂದು ಕೇಂದ್ರ ಅಲ್ಪ ಸಂಖ್ಯಾತರ ಕಲ್ಯಾಣ ಖಾತೆ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದಾರೆ.
ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಬಾರಿ ಹಜ್ ಯಾತ್ರೆಗೆ ಭಾರತದಿಂದ ಯಾರ್ಥಾತ್ರಿಗಳನ್ನು ಕಳುಹಿಸದಂತೆ ಸೌದಿ ಅರೇಬಿಯಾದ ಸಚಿವ ಡಾ. ಮೊಹಮ್ಮದ್ ಸಲೇಹ್ ಬಿನ್ ತಾಹೆರ್ ಬೆಂಟನ್ ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಯಾತ್ರೆ ರದ್ದುಗೊಳಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ದೂರವಾಣಿ ಕರೆ ಮಾಡಿದ್ದ ಡಾ. ಮೊಹಮ್ಮದ್ ಸಲೇಹ್ ಬಿನ್ ತಾಹೆರ್ ಬೆಂಟನ್, ಹಜ್ ಯಾತ್ರೆಗೆ ಅವಕಾಶ ನೀಡಿದರೆ ಸೋಂಕು ಹೆಚ್ಚಾಗಬಹುದು. ಇದರಿಂದ ಎರಡು ದೇಶಗಳಿಗೆ ಅಪಾಯ ಎದುರಾಗಬಹುದು ಹೀಗಾಗಿ ಈ ಬಾರಿ ಭಾರತದಿಂದ ಯಾತ್ರೆಗೆ ಯಾತ್ರಿಗಳನ್ನು ಕಳುಹಿಸದಂತೆ ಮನವಿ ಮಾಡಿದ್ದಾರೆ ಎಂದು ಸಚಿವ ನಕ್ವಿ ತಿಳಿಸಿದರು.
ಭಾರತದಲ್ಲಿ ಈವರೆಗೂ 2.13 ಲಕ್ಷ ಅರ್ಜಿಗಳು ಹಜ್ ಯಾತ್ರೆಗೆ ಸ್ವೀಕೃತಗೊಂಡಿದೆ. ಯಾತ್ರೆ ರದ್ದಾದ ಕಾರಣ ಅವರ ಹಣವನ್ನು ದಂಡ ಶುಲ್ಕವಿಲ್ಲದೇ ಮರುಪಾವತಿಸುವ ಪ್ರಕ್ರಿಯೆ ನಡೆದಿದೆ ಎಂದರು. ಈ ವರ್ಷ 2,300ಕ್ಕೂ ಹೆಚ್ಚು ಮಹಿಳೆಯರು ಮೆಹ್ರಾಮ್ ಇಲ್ಲದೆ ಹಜ್ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಈ ಮಹಿಳೆಯರಿಗೆ ಹಜ್ 2020ಗೆ ಅರ್ಜಿ ಸಲ್ಲಿಸಿದ ಆಧಾರದ ಮೇಲೆ ಹಜ್ 2021ಗೆ ಹೋಗಲು ಅವಕಾಶವಿರುತ್ತದೆ. ಅಲ್ಲದೆ ಹೊಸ ಅರ್ಜಿ ಸಲ್ಲಿಸುವ ಮಹಿಳೆಯರಿಗೂ ಮುಂದಿನ ವರ್ಷ ಹಜ್‍ಗೆ ಹೋಗಲು ಅವಕಾಶವಿರುತ್ತದೆ ಎಂದು ಸ್ಪಷ್ಟನೆ ನೀಡಿದರು.
2019ರಲ್ಲಿ ಒಟ್ಟು 2ಲಕ್ಷ ಭಾರತೀಯ ಮುಸ್ಲಿಮರು ಹಜ್ ಮಾಡಿದ್ದಾರೆ. ಈ ಯಾತ್ರಾರ್ಥಿಗಳಲ್ಲಿ 50 ಪ್ರತಿಶತ ಮಹಿಳೆಯರು ಸೇರಿದ್ದಾರೆ. 2018ರಲ್ಲಿ ಮೆಹ್ರಾಮ್ (ಪುರುಷ ಒಡನಾಡಿ) ಇಲ್ಲದೆ ಮುಸ್ಲಿಂ ಮಹಿಳೆಯರು ಹಜ್ ಮಾಡಬಹುದು ಎಂದು ಸರ್ಕಾರ ಖಚಿತಪಡಿಸಿದ ನಂತರ ಒಟ್ಟು 3,040 ಮಹಿಳೆಯರು ಹಜ್ ಯಾತ್ರೆ ಮಾಡಿದ್ದಾರೆ.