ಬೆಂಗಳೂರು: ರಾಜ್ಯದಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ ಜನತೆ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಸರ್ಕಾರದ ನಿಯಮಗಳನ್ನ ಪಾಲಿಸಬೇಕಾದ ಜನ ಖರೀದಿ ಭರಾಟೆಯಲ್ಲಿ ಎಲ್ಲವನ್ನು ಮರೆತು ಮಾರುಕಟ್ಟೆಗಳಲ್ಲಿ ಓಡಾಡುತ್ತಿದ್ದಾರೆ. ತರಕಾರಿ, ಹಣ್ಣ ಖರೀದಿ ನೆಪದಲ್ಲಿ ಹೊರ ಬಂದಿರೋ ಜನತೆ ಮನೆಗೆ ಕೊರೊನಾ ತೆಗೆದುಕೊಂಡು ಹೋಗ್ತಿದ್ದಾರಾ ಅನ್ನೋ ಅನುಮಾನ ಮೂಡಿದೆ.
ಕೆ.ಆರ್.ಮಾರ್ಕೆಟ್ ಕ್ಲೋಸ್ ಮಾಡಿದ್ರೂ, ಮಾರ್ಕೆಟ್ ಮುಂಭಾಗದ ಜೆ.ಪಿ.ರೋಡ್ ನಲ್ಲಿ ಜನಜಾತ್ರೆಯೇ ಸೇರಿದೆ. ಬೆಳ್ಳಂಬೆಳಗ್ಗೆ ಹಣ್ಣು, ತರಕಾರಿಗಳನ್ನು ಕೊಳ್ಳಲು ಜನ ಮುಗಿಬಿದ್ದಿದ್ದಾರೆ. ವ್ಯಾಪಾರದ ನೆಪದಲ್ಲಿ ಗುಂಪು ಗುಂಪಾಗಿ ಸೇರಿ, ಸಾಮಾಜಿಕ ಅಂತರವನ್ನು ಮರೆಯುತ್ತಿದ್ದಾರೆ. ಜೊತೆಗೆ ವಾಹನಗಳ ದಟ್ಟಣೆಯೂ ಹೆಚ್ಚಾಗಿದೆ.
ವೈಯಾಲಿಕಾವಲ್ ನಾ ಬೈ-ಎನ್- ಸೇವ್ ದಿನ ಬಳಕೆ ವಸ್ತುಗಳ ಸ್ಟೋರ್ ಮುಂದೆ ಕಿ.ಮೀ ವರೆಗೂ ಜನ ಕ್ಯೂ ನಿಂತಿದ್ದಾರೆ. ಕಣ್ಣು ಹಾಯಿಸಿದಷ್ಟು ದೂರ ಜನರ ಕ್ಯೂ ಇದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿ ಸಾಲಿನಲ್ಲಿ ಕ್ಯೂ ನಿಂತಿದ್ದಾರೆ.
ಯಶವಂತಪುರ ಮಾರ್ಕೆಟ್ ನಲ್ಲಿ ಜನಜಂಗುಳಿ ಹೆಚ್ಚಾಗಿದೆ. ಕೊರೊನಾ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದ್ದು, ಜನರನ್ನ ಎಚ್ಚರಿಸಲು ಮಾರ್ಷಲ್ ಆಗಲಿ ಪೊಲೀಸರಾಗಲಿ ಇಲ್ಲ. ಜನಸಂದಣಿ ಹೆಚ್ಚಾಗಿದ್ದರಿಂದ ವಾಹನಗಳ ಸ್ಲೋ ಮೂವಿಂಗ್ ಇದೆ.