ಕಾಸರಗೋಡು: ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡಿಸಿ ಡಾ.ಡಿ ಸಜಿತ್ ಬಾಬು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅ.2 ರಾತ್ರಿ 12 ಗಂಟೆಯಿಂದ ಅ.9ರಂದು ರಾತ್ರಿ 12 ಗಂಟೆವರೆಗೆ 1973ರ ಕ್ರಿಮಿನಲ್ ಕಾಯಿದೆ 144 ಪ್ರಕಾರದ ನಿಷೇಧಾಜ್ಞೆ ಜಾರಿಯಲ್ಲಿರುವುದು. ಹೀಗಾಗಿ ಜಿಲ್ಲೆಯ ಜನತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಬೂನು/ ಸಾನಿಟೈಸರ್ ಬಳಸಿ ಕೈಗಳನ್ನು ಶುಚಿಗೊಳಿಸಿ, ಮಾಸ್ಕ್ ಸೂಕ್ತ ರೀತಿ ಬಳಸಿ, ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಪಾಲಿಸಿಕೊಳ್ಳುವ ಮೂಲಕ ಸಹಕರಿಸುವಂತೆ ಹೇಳಿದರು.
Advertisement
Advertisement
ವಿವಾಹ ಸಂಬಂಧ ಸಮಾರಂಭಗಳಲ್ಲಿ ಗರಿಷ್ಠ 50 ಮಂದಿ, ಮರಣ, ಉತ್ತರ ಕ್ರಿಯೆ ಸಹಿತ ಸಮಾರಂಭಗಳಲ್ಲಿ ಗರಿಷ್ಠ 20 ಮಂದಿ ಭಾಗವಹಿಸಬಹುದಾಗಿದೆ. ಅಧಿಕೃತ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು, ಪ್ರಾರ್ಥನೆ, ರಾಜಕೀಯ ಪಕ್ಷಗಳ ಸಭೆಗಳು, ಸಾಂಸ್ಕೃತಿಕ-ಸಾಮಾಜಿಕ ಸಾರ್ವಜನಿಕ ಸಮಾರಂಭಗಳು ಇತ್ಯಾದಿ ಕಡೆ 20 ಮಂದಿ ಭಾಗವಹಿಸಲು ಮಾತ್ರ ಅನುಮತಿ ನೀಡಲಾಗುವುದು.
Advertisement
Advertisement
ಸಾರ್ವಜನಿಕ ಉತ್ಸವಗಳು, ಬಸ್ ನಿಲ್ದಾಣ, ಸಾರ್ವಜನಿಕ ಸಂಚಾರ ವ್ಯವಸ್ಥೆ, ಕಚೇರಿಗಳು, ನೌಕರಿ ಕೇಂದ್ರಗಳು, ಅಂಗಡಿಗಳು, ಇನ್ನಿತರ ವಾಣಿಜ್ಯ-ವ್ಯಾಪಾರ ಸಂಸ್ಥೇಗಳು, ಉದ್ದಿಮೆ ಕೇಂದ್ರಗಳು, ಆಸ್ಪತ್ರೆಗಳು, ಆರೋಗ್ಯ ಕ್ಲಬ್ ಗಳು, ಕ್ರೀಡಾ ತರಬೇತಿ ಕೇಂದ್ರಗಳು, ಪರೀಕ್ಷೆ, ರಿಕ್ರೂಟ್ ಮೆಂಟ್ ವ್ಯವಸ್ಥೇಗಳು ಇತ್ಯಾದಿ ಕಡ್ಡಾಯವಾಗಿ ಕೋವಿಡ್ ಪ್ರತಿರೋಧ ಅಂಗವಾಗಿ ಬ್ರೇಕ್ ದಿ ಚೈನ್ ಸಂಹಿತೆ ಕಡ್ಡಾಯವಾಗಿ ಪಾಲಿಸಬೇಕು.
ಮಂಜೇಶ್ವರ, ಕುಂಬಳೆ, ಬದಿಯಡ್ಕ, ಕಾಸರಗೋಡು, ವಿದ್ಯಾನಗರ, ಮೇಲ್ಪರಂಬ, ಬೇಕಲ, ಹೊಸದುರ್ಗ, ನೀಲೇಶ್ವರ, ಚಂದೇರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೂ, ಪರಪ್ಪ, ಒಡಯಂಚಾಲ್, ಪನತ್ತಡಿ ಪೇಟೆ ವ್ಯಾಪ್ತಿಗಳಲ್ಲೂ 5 ಮಂದಿಗಿಂತ ಅಧಿಕ ಜನ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರ ಆದೇಶದಲ್ಲಿ ತಿಳಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಆದೇಶದ ಜಾರಿಯ ಖಚಿತತೆ ನಡೆಸಬೇಕು. ಜನ ಸೇರುವ ಸಾರ್ವಜನಿಕ ಪ್ರದೇಶಗಳಾದ ಮಾರುಕಟ್ಟೆ, ಬಸ್ ನಿಲ್ದಾಣ, ಬಸ್ ಗಾಗಿ ಕಾದು ನಿಲ್ಲುವ ತಾಣಗಳು ಸಹಿತ ಕೇಂದ್ರಗಳಲ್ಲಿ ದಿನಕ್ಕೆ ಕನಿಷ್ಠ ಒಂದು ಬಾರಿ ರೋಗಾಣುಮುಕ್ತ ಚಟುವಟಿಕೆ ನಡೆಸುವಂತೆ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳಿಗೆ ಆದೇಶ ನೀಡಲಾಗಿದೆ.