– ಇದು ಪೂರ್ವ ನಿಯೋಜಿತ ಕೃತ್ಯ
– ಚಿಕಿತ್ಸೆ ನೀಡಿದ ವೈದ್ಯರನ್ನು ತೋರಿಸಿ
– ಪಟ್ಟು ಹಿಡಿದಿದ್ದ ಮೃತನ ಸಂಬಂಧಿಕರು
ಬೆಳಗಾವಿ: ಜಿಲ್ಲೆಯ ಬಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿ ಸತ್ತಿದ್ದಕ್ಕೆ ಆತನ ಸಂಬಂಧಿಕರು ಅಂಬುಲೆನ್ಸ್‌ಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ಮಾಡಿದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬುಧವಾರ ರಾತ್ರಿ ಬಿಮ್ಸ್ ಆಸ್ಪತ್ರೆಯ ಐಸಿಯು ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ ಸಾವನ್ನಪ್ಪಿದ್ದ. ಇದರಿಂದ ರೊಚ್ಚಿಗೆದ್ದ ಆತನ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ, ಆಸ್ಪತ್ರೆ ಮುಂದೆ ನಿಂತಿದ್ದ ಅಂಬುಲೆನ್ಸ್ ಗೆ ಬೆಂಕಿ ಹಚ್ಚಿದ್ದರು. ಅಲ್ಲದೇ ಆಸ್ಪತ್ರೆ ಮುಂಭಾಗ ಕಲ್ಲು ತೂರಾಟ ಮಾಡಿದ್ದರು.
Advertisement
Advertisement
ಈ ಘಟನೆ ಸಂಬಂಧಿಸಿದಂತೆ ಬಿಮ್ಸ್ ಆಸ್ಪತ್ರೆ ವೈದ್ಯರು ದೂರು ನೀಡಿದ್ದು, ಈಗ ಮೃತನ 8 ಸಂಬಂಧಿಕರು ಸೇರಿ ಇತರೆ 15 ಜನರ ವಿರುದ್ಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಜೊತೆಗೆ ಘಟನೆಯನ್ನು ಖಂಡಿಸಿ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ ಮಾಡುತ್ತಿದ್ದು, ನಾವು ನಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತೇವೆ. ಆದರೆ ನಮ್ಮ ಮೇಲೆ ಹಲ್ಲೆ ಮಾಡಲು ಕೆಲವರು ಮುಂದಾಗಿದ್ದಾರೆ. ಅವರಿಗೆ ಶಿಕ್ಷೆ ಆಗಬೇಕು. ಇಲ್ಲವಾದರೆ ನಾವು ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ.
Advertisement
Advertisement
ನಿನ್ನೆ ರಾತ್ರಿ ಸೋಂಕಿತ ಮೃತಪಡುತ್ತಿದಂತೆ ಆಸ್ಪತ್ರೆಗೆ ಬಂದ ಸಂಬಂಧಿಕರು, ನಮಗೆ ಚಿಕಿತ್ಸೆ ಮಾಡಿದ ವೈದ್ಯರನ್ನು ತೋರಿಸಿ, ಆತ ನಮಗೆ ಬೇಕು ಎಂದು ಗಲಾಟೆ ಮಾಡಿದ್ದಾರೆ. ಜೊತೆಗೆ ಮೂವರು ವೈದ್ಯರು, ಇಬ್ಬರು ನರ್ಸ್ ಸೇರಿ ಐದು ಜನರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಜೊತೆಗೆ ಪಿಪಿಇ ಕಿಟ್, ಬಟ್ಟೆ ಹರಿದು ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ. ಜೀವ ಉಳಿಸಿಕೊಳ್ಳಲು ಕೊರೊನಾ ವಾರಿಯರ್ಸ್ ಓಡಿ ಹೋಗಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಜುಲೈ 19ರಂದು ರೋಗಿ ಆಸ್ಪತ್ರೆಗೆ ಆಡ್ಮಿಟ್ ಆಗಿದ್ದರು. ನಿನ್ನೆ ಹೆಚ್ಚಿನ ಚಿಕಿತ್ಸೆಗೆಂದು ಐಸಿಯುಗೆ ಶಿಫ್ಟ್ ಮಾಡಿದಾಗ ರೋಗಿ ಸಾವನ್ನಪ್ಪಿದ್ದಾರೆ. ಜೀವದ ಹಂಗು ತೊರೆದು ಡಾಕ್ಟರ್ ಮತ್ತು ನರ್ಸ್ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ರೀತಿ ಕೃತ್ಯಕ್ಕೆ ಯಾರು ಇಳಿಯಬಾರದು. ವೈದ್ಯರು ಹೆದರಿಬಿಟ್ಟಿದ್ದರು ಅವರನ್ನು ಕರೆದು ಮಾತಾಡಿದ್ದೇನೆ. ಡಿಎಚ್‍ಓ ಕೇಸ್ ದಾಖಲಿಸುತ್ತಿದ್ದಾರೆ. ಕೃತ್ಯ ಎಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಜೊತೆಗೆ ಆಸ್ಪತ್ರೆಯ ಸುತ್ತಮುತ್ತ 144 ಸೆಕ್ಷನ್ ಅನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಜಾರಿ ಮಾಡುತ್ತೇವೆ ಎಂದಿದ್ದಾರೆ.
ನಿನ್ನೆ ರಾತ್ರಿ ನಡೆದ ಕೃತ್ಯ ಪೂರ್ವನಿಯೋಜಿತವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ರೋಗಿಯ ಸಂಬಂಧಿಕರು ಗಲಾಟೆ ಮಾಡಬೇಕು ಎಂದೇ ಜನರನ್ನು ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಈ ಘಟನೆಯಲ್ಲಿ ಒಂದು ಕೊರೊನಾ ಅಂಬುಲೆನ್ಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಜೊತೆಗೆ ಜೈಲು ವಾಹನ ಸೇರಿ 5ಕ್ಕೂ ಹೆಚ್ಚು ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.