ಹಾವೇರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಹಾವೇರಿಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಗೆ ಸಿಸೇರಿಯನ್ ಮೂಲಕ ಯಶಸ್ವಿ ಹೆರಿಗೆಯನ್ನು ಜಿಲ್ಲಾಸ್ಪತ್ರೆ ವೈದ್ಯರು ಮಾಡಿಸಿದ್ದಾರೆ.
ಜಿಲ್ಲೆಯ ಹಾನಗಲ್ ತಾಲೂಕಿನ ಜಾನಗುಂಡಿಕೊಪ್ಪ ಗ್ರಾಮದ ಮೂವತ್ತು ವರ್ಷದ ಮಹಿಳೆಗೆ ವೈದ್ಯರು ಜೀವದ ಹಂಗು ತೊರೆದು ಹೆರಿಗೆ ಮಾಡಿಸಿದ್ದಾರೆ. ಜುಲೈ 3ರಂದು ಜಿಲ್ಲಾಸ್ಪತ್ರೆಗೆ ತಪಾಸಣೆಗೆ ಬಂದಿದ್ದ ಗರ್ಭಿಣಿ ಗಂಟಲು ದ್ರವದ ಮಾದರಿಯನ್ನು ಸಹ ನೀಡಿ ಹೋಗಿದ್ದರು. ಈ ವೇಳೆ ಜುಲೈ 10ರಂದು ಹೆರಿಗೆಯ ವೈದ್ಯರು ದಿನಾಂಕ ನೀಡಿದ್ದರು. ಆದರೆ ಸೋಮವಾರ ಬಂದ ವರದಿಯಲ್ಲಿ ಮಹಿಳೆಯಲ್ಲಿ ಕೊರೊನಾ ಸೋಂಕು ಇರುವ ದೃಢಪಟ್ಟಿದೆ.
Advertisement
Advertisement
ಸೋಂಕು ದೃಢಪಟ್ಟ ಮಹಿಳೆಯನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಇವತ್ತು ಬೆಳಗಿನ ಜಾವ ಸೋಂಕಿತ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಸಿಸೇರಿಯನ್ ಮೂಲಕ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.