ಸೋಂಕಿತರೆಲ್ಲರೂ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇಲ್ಲ: ಡಾ. ಶಂಕರ್

Public TV
3 Min Read
MANIPAL DOCTER

ಬೆಂಗಳೂರು: ಕೊರೊನಾ ಎರಡನೇ ಅಲೆ ಈಗಾಗಲೇ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಸಾರ್ವಜನಿಕರಲ್ಲಿ ಕೊರೊನಾದ ಸಣ್ಣ ಪ್ರಮಾಣದ ಲಕ್ಷಣಗಳು ಕಂಡು ಬಂದರೆ ಗಾಬರಿ ಪಡಬೇಕಾಗಿಲ್ಲ. ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಔಷಧಿಗಳನ್ನು ಪಡೆದುಕೊಂಡು ಮನೆಯಲ್ಲೇ ವಿಶ್ರಾಂತಿ ಪಡೆಯಿರಿ ಎಂದು ಮಲ್ಲೇಶ್ವರಂ ನಾರ್ತ್ ಮಣಿಪಾಲ ಆಸ್ಪತ್ರೆ ಯ ತಜ್ಞ ವೈದ್ಯ ಡಾ ಶಂಕರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

MANIPAL DOCTER 1

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಾ.ಶಂಕರ್ ಅವರು, ರಾಜ್ಯದ ಪ್ರತಿಯೊಂದು ಆಸ್ಪತ್ರೆಗಳಲ್ಲಿ ಕೂಡ ಬೆಡ್, ಐಸಿಯು, ವೆಂಟಿಲೇಟರ್ ಎಲ್ಲವೂ ಕೂಡ ಭರ್ತಿಯಾಗಿದೆ. ಹಾಗಾಗಿ ಸಾರ್ವಜನಿಕರು ಸುಮ್ಮನೆ ಗಾಬರಿಯಾಗಿಕೊಂಡು ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇಲ್ಲ. ನೀವು ವೈದ್ಯರನ್ನು ಸಂಪರ್ಕಿಸಿ ನಿಮ್ಮ ಮನೆಯಲ್ಲೇ ಸೂಕ್ತ ಔಷಧಿಗಳನ್ನು ಪಡೆದುಕೊಂಡು ವಿಶ್ರಾಂತಿ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.

corona test 2

ಕೊರೊನಾ ಸೋಂಕನ್ನು ಮೂರು ಮಾದರಿಯಲ್ಲಿ ವಿಂಗಡನೆ ಮಾಡಲಾಗುತ್ತದೆ. ಅದರಲ್ಲಿ ಮೊದಲ ಹಂತದಲ್ಲಿ ರೋಗಿಯ ರಕ್ತ ಪರೀಕ್ಷೆ ಅಥವಾ ಲಕ್ಷಣಗಳನ್ನು ಗಮನಿಸುತ್ತೇವೆ. ಕೊರೊನಾ ಮೊದಲ ಅಲೆಯಲ್ಲಿ ಶ್ವಾಸಕೋಶದ ಸಮಸ್ಯೆಗಳು ಕಂಡು ಬಂದಿತ್ತು. ಆದರೆ ಎರಡನೇ ಅಲೆ ಬೇರೆಯೇ ಆಗಿದ್ದು, ಮೈಕೈನೋವು, ಸೊಂಟ ನೋವು, ನಾಲಗೆ ರುಚಿ ಇಲ್ಲದೆ ಇರುವುದು ಮತ್ತು ಚರ್ಮ ಅಲರ್ಜಿಗಳನ್ನು ನೋಡಬಹುದು. ಅದೇ ರೀತಿ ನಾನು ನೋಡಿದ ಪ್ರಕಾರ ವಾಂತಿ ಭೇದಿ ಕಂಡು ಬರುತ್ತಿದೆ ಇದು ಕೂಡ 20ರಿಂದ 40 ವರ್ಷ ಪ್ರಾಯದವರಲ್ಲಿ ಹೆಚ್ಚು ಕಂಡು ಬರುತ್ತಿದೆ. ಇದು ನಾವು ಮಾಡುತ್ತಿರುವ ನಿರ್ಲಕ್ಷ್ಯದಿಂದಾಗಿ ಬರುತ್ತಿದೆ. ಸಾರ್ವಜನಿಕರು ಸರಿಯಾಗಿ ಮಸ್ಕ್ ಹಾಕದೆ ಓಡಾಡುತ್ತಿದ್ದು, ಸಾಮಾಜಿಕ ಅಂತರ ಕಾಪಾಡದೆ ಇರುವುದರಿಂದ ಮತ್ತು ಸಭೆ ಸಮಾರಂಭಗಳಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಂಡು ಸೋಂಕು ಹರಡಿಸಿಕೊಳ್ಳುತ್ತಿದ್ದೇವೆ ಎಂದು ಅಭಿಪ್ರಾಯಾಪಟ್ಟರು.

ಕೊರೊನಾ ಎರಡನೇ ಅಲೆಯಲ್ಲಿ ಇದೇ ರೀತಿಯ ಲಕ್ಷಣಗಳಿವೆ ಎಂದು ಹೇಳಲಾಗುತ್ತಿಲ್ಲ ಆದರೆ ಲಕ್ಷಣಗಳು ಕಂಡು ಬಂದರೆ ಸಾರ್ವಜನಿಕರು ನಿಮ್ಮ ವೈದ್ಯರನ್ನು ಕಂಡು ಸೂಕ್ತ ಔಷಧಿ ಪಡೆದುಕೊಂಡು, ವ್ಯಾಯಾಮಮಾಡಿ ಮತ್ತು ಒಳ್ಳೆಯ ಆಹಾರ ಪಡೆದುಕೊಂಡರೆ ಅಂತವರು ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇಲ್ಲ. ಯಾರಿಗೆ ತುಂಬಾ ವಯಸ್ಸಾಗಿದೆ, ಹೃದಯ ಸಂಬಂಧಿತ ಖಾಯಿಲೆಯಿಂದ, ಸರ್ಜರಿ, ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರಿಗೆ ಸೋಂಕು ಬಂದರೆ ಬೆಡ್ ಬೇಕಾಗಿದ್ದು, ಇದನ್ನು ಹೊರತುಪಡಿಸಿ ಸಣ್ಣ ಪ್ರಮಾಣದ ಲಕ್ಷಣಗಳಿದ್ದರೆ ಅಂತವರಿಗೆ ಬೆಡ್‍ನ ಅವಶ್ಯಕತೆ ಇಲ್ಲ. ಅವರು ಮನೆಯಲ್ಲೇ ಔಷಧಿ ಪಡೆದು ಸೋಂಕನ್ನು ಗುಣಪಡಿಸಿಕೊಳ್ಳಬಹುದು. ಈಗಾಗಲೇ ರಾಜ್ಯದ ವೈದ್ಯರೆಲ್ಲರೂ ಕೂಡ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಮಯ ಕೆಲಸ ನಿರ್ವಹಿಸಿ ಸಾರ್ವಜನಿಕರ ಆರೋಗ್ಯ ಕಾಪಾಡಲು ಪ್ರಯತ್ನಿಸುತ್ತಿದ್ದೇವೆ ಎಂದರು.

mask 2

ದಯವಿಟ್ಟು ಸಾರ್ವಜನಿಕರು ಸೋಂಕಿನ ಬಗ್ಗೆ ನಿರ್ಲಕ್ಷ್ಯ ಮಾಡದೆ. ಎಚ್ಚೆತ್ತುಕೊಳ್ಳಿ ತುಂಬಾ ಪ್ರಮಾಣದಲ್ಲಿ ಸೋಂಕು ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ಬನ್ನಿ ನಾವೆಲ್ಲರು ನಿಮಗೆ ಸಹಾಯಮಾಡಲು ತಯಾರಿದ್ದೇವೆ. ಒಬ್ಬರಿಗೆ ಸಣ್ಣ ಪ್ರಮಾಣದ ಸೋಂಕಿನ ಲಕ್ಷಣ ಕಂಡು ಬಂದರೆ ಮನೆಯಲ್ಲಿ ಬೇರೆ ಕೊಠಡಿಯಲ್ಲಿ ಐಸೋಲೇಶನ್ ಆಗಿ. ಇದರಿಂದ ನಿಮ್ಮ ಮನೆಯವರಿಗೆ ಸೋಂಕು ಹರಡದಂತೆ ಕಾಪಾಡಬಹುದು. ಸೋಂಕು ಕಂಡು ಬಂದರೆ ಔಷಧಿಗಳನ್ನು ಪಡೆದುಕೊಂಡು ವ್ಯಾಯಾಮಗಳನ್ನು ಮತ್ತು ವಿಟಮಿನ್ ಸಿ ಹೆಚ್ಚಿಸಿಕೊಂಡು ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ ನೀವು ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇಲ್ಲ. ಕೊರೊನಾ ಎರಡನೇ ಅಲೆ, ಮೊದಲನೇ ಅಲೆಗಿಂತ ವೇಗವಾಗಿ ಹರಡುತ್ತಿದೆ. ಆದರೆ ಮರಣ ಪ್ರಮಾಣ ಕಡಿಮೆ. ಯುವಕರಲ್ಲಿ ಸೋಂಕು ಕಂಡು ಬಂದರೆ ಬೇಗ ಕಡಿಮೆಯಾಗುತ್ತದೆ. ಹಾಗಾಗಿ ಸಾರ್ವಜನಿಕರೆಲ್ಲರೂ ಕೂಡ ನಮ್ಮೊಂದಿಗೆ ಸಹಕರಿಸಿ ಸಣ್ಣ ಪ್ರಮಾಣದಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದರೂ ಕೂಡ ವೈದ್ಯರನ್ನು ಭೇಟಿಯಾಗಿ ಸೂಕ್ತ ಔಷಧಿ ಪಡೆದುಕೊಳ್ಳಿ ಎಲ್ಲರೂ ಕೂಡ ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್‍ಗಳನ್ನು ಸರಿಯಾಗಿ ಬಳಕೆ ಮಾಡಿ, ಸ್ಯಾನಿಟೈಸರ್ ಬಳಕೆ ಮಾಡಿ ಮತ್ತು ಅನವಶ್ಯಕ ಓಡಾಟ ಮತ್ತು ಪಾರ್ಟಿ, ಮದುವೆ, ಕಾರ್ಯಕ್ರಮಗಳನ್ನು ಬದಿಗೊತ್ತಿ. ಇನ್ನು ಒಂದು, ಒಂದುವರೆ ತಿಂಗಳು ತುಂಬಾ ಜಾಗರೂಕರಾಗಿ ಇರಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *