ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿನ ಕೋವಿಡ್ ರೋಗಿಗಳಿಗೆ ಆಮ್ಲಜನಕ ಪೂರೈಕೆಗೆ ಪ್ರತಿ ದಿನ ಮೈಸೂರಿಗೆ ಹೋಗಿ ಆಕ್ಸಿಜನ್ ಸಿಲಿಂಡರ್ ಗಳನ್ನು ತುಂಬಿಸಿಕೊಂಡು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಎಲ್ಲೂ ಆಕ್ಸಿಜನ್ ಫಿಲ್ಲಿಂಗ್ ಸೆಂಟರ್ ಇಲ್ಲದ ಕಾರಣ ಪ್ರತಿನಿತ್ಯ ಮೈಸೂರನ್ನೇ ಅವಲಂಬಿಸಬೇಕಾದೆ. ಈ ನಡುವೆ ಆಮ್ಲಜನಕದ ಕೊರತೆ ನೀಗಿಸಲು ಜಿಲ್ಲಾಸ್ಪತ್ರೆ ಆವರಣದಲ್ಲಿ 65 ಲಕ್ಷ ರೂ. ವೆಚ್ಚದಲ್ಲಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲಾಗಿದೆ. ಆದರೆ ಇನ್ನೂ ಕಾರ್ಯಾರಂಭ ಮಾಡಿಲ್ಲ.
ಜಿಲ್ಲೆಯಲ್ಲಿ ಪ್ರತಿನಿತ್ಯ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಆಮ್ಲಜನಕಕ್ಕೆ ಭಾರೀ ಬೇಡಿಕೆ ಉಂಟಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 100 ಆಮ್ಲಜನಕಯುಕ್ತ ಬೆಡ್ ಹಾಗೂ 48 ಐಸಿಯು ಬೆಡ್ ಗಳಿದ್ದು, ಇಲ್ಲಿನ ಕೋವಿಡ್ ರೋಗಿಗಳಿಗೆ ನಿರಂತರವಾಗಿ ಆಮ್ಲಜನಕ ಪೂರೈಸಲು ನಿತ್ಯ 280 ಜಂಬೋ ಸಿಲಿಂಡರ್ ಗಳ ಅಗತ್ಯವಿದೆ. ಪ್ರತಿನಿತ್ಯ ಮೈಸೂರಿಗೆ ಹೋಗಿ ತುಂಬಿಸಿಕೊಂಡು ಬರಬೇಕು. ಹೀಗೆ ತಂದ ಆಕ್ಸಿಜನ್ ಸಿಲಿಂಡರ್‍ಗಳಲ್ಲಿ ಪ್ರತಿ 5 ನಿಮಿಷಕ್ಕೆ ಒಂದು ಸಿಲಿಂಡರ್ ನಂತೆ ಒಂದು ಗಂಟೆಗೆ 10 ಸಿಲಿಂಡರ್ ಖಾಲಿಯಾಗುತ್ತಿವೆ.
ಈ ಮೊದಲು ಮೈಸೂರಿನಲ್ಲಿ ಮೂರು ಕಂಪನಿಗಳು ಆಮ್ಲಜನಕ ಪೂರೈಸುತ್ತಿದ್ದವು. ಆದರೆ ಈಗ ಒಂದು ಕಂಪನಿ ಮಾತ್ರ ಆಮ್ಲಜನಕ ಪೂರೈಕೆ ಮಾಡುತ್ತಿರುವುದರಿಂದ ಚಾಮರಾಜನಗರದಿಂದ ಹೋಗುವ ಲಾರಿ ಕ್ಯೂನಲ್ಲಿ ನಿಂತು ಬಹಳಷ್ಟು ಹೊತ್ತು ಕಾದು ಸಿಲಿಂಡರ್ ಗಳನ್ನು ತುಂಬಿಸಿಕೊಂಡು ಬರಬೇಕಾಗಿದೆ. ಹೀಗೆ ಬರುವ ಸಿಲಿಂಡರ್ ಗಳು ಕೆಲವೇ ಗಂಟೆಗಳಲ್ಲಿ ಖಾಲಿಯಾಗುವುದರಿಂದ ಪದೇ ಪದೇ ಮೈಸೂರಿಗೆ ಹೋಗಿ ಆಮ್ಲಜನಕ ತುಂಬಿಸಿ ತರಲು ವೈದ್ಯಾಧಿಕಾರಿಗಳು ಹೆಣಗಾಟ ನಡೆಸುತ್ತಿದ್ದು, ಸದಾ ಒತ್ತಡದಲ್ಲೇ ಕಾರ್ಯನಿರ್ವಹಿಸಬೇಕಾದ ದುಸ್ಥಿತಿ ಎದುರಾಗಿದೆ.
ಆಮ್ಲಜನಕ ಕೊರತೆ ನೀಗಿಸಲು ಜಿಲ್ಲಾಸ್ಪತ್ರೆ ಆವರಣದಲ್ಲಿ 65 ಲಕ್ಷ ರೂ. ವೆಚ್ಚದಲ್ಲಿ 6,000 ಕಿಲೋ ಲೀಟರ್ ಸಾಮಥ್ರ್ಯದ ಲಿಕ್ವಿಡ್ ಆಕ್ಸಿಜನ್ ಘಟಕ ಸ್ಥಾಪಿಸಲಾಗಿದೆ. ಆದರೆ ಇದು ಇನ್ನೂ ಕಾರ್ಯಾರಂಭ ಮಾಡಿಲ್ಲ, ಈ ಘಟಕ ಆರಂಭವಾದ ನಂತರ ಮೈಸೂರಿಗೆ ಓಡಾಟ ತಪ್ಪುತ್ತದೆ. ಯಾವುದೇ ಅಡಚಣೆ ಇಲ್ಲದಂತೆ ರೋಗಿಗಳಿಗೆ ನಿರಂತರವಾಗಿ ಆಮ್ಲಜನಕ ಪೂರೈಸಬಹುದು ಎಂಬುದು ವೈದ್ಯಾಧಿಕಾರಿಗಳ ಆಶಯವಾಗಿದೆ.