ಹಾಸನ: ರಜೆಯಲ್ಲಿದ್ದ ಸೈನಿಕನೋರ್ವ ಆತನ ಕುಟುಂಬದ ಜೊತೆ ಪ್ರಯಾಣಿಸುತ್ತಿದ್ದ ವೇಳೆ ಹಿಂಸೆ ನೀಡಿ ಅಮಾನವೀಯವಾಗಿ ವರ್ತಿಸಿದವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಮಾಜಿ ಸೈನಿಕರ ಸಂಘದಿಂದ ಮೌನ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಜುಲೈ 25 ರಂದು ಕುಶಾಲನಗರದಿಂದ ಮಡಿಕೇರಿಗೆ ಕಾರಿನಲ್ಲಿ ಬರುತ್ತಿದ್ದ ವೇಳೆ, ಭಾರತೀಯ ಸೈನಿಕನ ಕಾರಿಗೆ ಹಿಂಬದಿಯಿಂದ ಶುಂಠಿ ಕೊಪ್ಪ ಗ್ರಾಮ ಪಂಚಾಯ್ತಿ ಸದಸ್ಯ ರಫೀಕ್ ಕಾರು ಡಿಕ್ಕಿಯಾಗಿತ್ತು. ಆಗ ಇಬ್ಬರ ನಡುವೆ ಪರಸ್ಪರ ವಾಗ್ವಾದವಾಗಿ ಗಲಾಟೆ ನಡೆದಿತ್ತು. ಸೈನಿಕ ಮತ್ತು ಆತನ ಕುಟುಂಬದ ಸದಸ್ಯರ ಮೇಲೆ ಹಿಂಸೆ ಮತ್ತು ಅಮಾನವೀಯವಾಗಿ ಈ ವೇಳೆ ವರ್ತಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರು ಹೋಗುವುದಾಗಿ ಹೇಳಿ 3 ದಿನದ ಹಿಂದೆ ಮನೆ ಬಿಟ್ಟವ ಶವವಾಗಿ ಪತ್ತೆ
ಇದನ್ನು ಖಂಡಿಸಿ ಹಾಸನದ ಮಾಜಿ ಸೈನಿಕರು ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೌನ ಪ್ರತಿಭಟನಾ ಮೆರವಣಿಗೆ ಹೊರಟು, ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತಲುಪಿದರು. ಬಳಿಕ ಯೋಧನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಶಿಕ್ಷೆ ವಿಧಿಸಿ ಮುಂದೆ ಇಂತಹ ಘಟನೆ ಮರುಕಳಿಸದಂತೆ ನಿಗಾವಹಿಸಬೇಕೆಂದು ಒತ್ತಾಯಿಸಿದರು.
ಮೌನ ಪ್ರತಿಭಟನೆಯಲ್ಲಿ ನಿವೃತ್ತ ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಜಿ.ಕೆ ಪುಟ್ಟರಾಜು, ಕಾರ್ಯದರ್ಶಿ ಎ.ಎಸ್ ಪ್ರದೀಪ್ ಸಾಗರ್, ಖಜಾಂಚಿ ಸಿ.ಇ. ಕಾಳೇಗೌಡ, ಟಿ.ಕೆ ಯೋಗೀಶ್, ಯು.ಎ ಗಂಗಾಧರ್ ಇತರರು ಪಾಲ್ಗೊಂಡಿದ್ದರು.