ಸೇನೆಗೆ ವಿಶೇಷ ಗೌರವ ಸಲ್ಲಿಸಿದ ಸಿಎಸ್‍ಕೆ

Public TV
2 Min Read
CSK

– ಸೇನೆಯ ಬಣ್ಣ ಮಿಶ್ರಿತ ಸಿಎಸ್‍ಕೆಯ ನೂತನ ಜೆರ್ಸಿ ಬಿಡುಗಡೆ ಮಾಡಿದ ಎಂ.ಎಸ್ ಧೋನಿ

ಚೆನ್ನೈ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‍ಗೆ ಕೆಲವೇ ದಿನಗಳು ಬಾಕಿ ಇರುವಂತೆ ಕೆಲ ತಂಡಗಳು ತಯಾರಿಯಲ್ಲಿ ತೊಡಗಿಕೊಂಡಿದೆ. ಇತ್ತ ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ತಂಡದ ಸೇನೆಯ ಬಣ್ಣ ಮಿಶ್ರಿತ ನೂತನ ಜೆರ್ಸಿಯನ್ನು ಅನಾವರಣಗೊಳಿಸಿದ್ದಾರೆ.

CSK

2008 ರಿಂದ ಒಂದೇ ಮಾದರಿಯ ಜರ್ಸಿಯಲ್ಲಿ ಐಪಿಎಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಿಎಸ್‍ಕೆ ತಂಡ ಈ ಬಾರಿ ಜೆರ್ಸಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದೆ. ಭುಜದ ಭಾಗಗಳಲ್ಲಿ ಸೇನೆಯ ಬಣ್ಣ ಮಿಶ್ರಿತ ನೂತನ ಜೆರ್ಸಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ ತಂಡದ ನಾಯಕ ಧೋನಿಯ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿರುವ ಸಿಎಸ್‍ಕೆ ಫ್ರಾಂಚೈಸಿ, ಇದು ಸಿಎಸ್‍ಕೆ ತಂಡ ಸೇನೆಗೆ ನೀಡುವ ಗೌರವ ಎಂದು ಬರೆದುಕೊಂಡಿದೆ.

ಕೆಲ ಸಮಯಗಳಿಂದ ಇಂತಹ ಅಲೋಚನೆ ನಮ್ಮಲ್ಲಿತ್ತು. ಇದೀಗ ಜೆರ್ಸಿಯಲ್ಲಿ ಸೇನೆಯ ಬಣ್ಣವನ್ನು ಬೆರೆಸುವ ಮೂಲಕ ಜನರಲ್ಲಿ ಭಾರತದ ಸೇನೆಯ ಬಗ್ಗೆ ಗೌರವ ಭಾವ ಮೂಡುವಂತೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದೇವೆ. ಸೇನೆಯ ಬಣ್ಣವನ್ನು ಬೆರೆಸುವ ಮೂಲಕ ಸೈನಿಕರಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಅವರೇ ನಮ್ಮ ನಿಜವಾದ ಹೀರೋಗಳು ಎಂದು ತಂಡದ ಸಿಇಒ ಕೆ.ಎಸ್ ವಿಶ್ವನಾಥನ್ ಅಭಿಪ್ರಾಯಪಟ್ಟಿದ್ದಾರೆ.

ಸಿಎಸ್‍ಕೆಯ ನೂತನ ಜೆರ್ಸಿಯ ಭುಜ ಭಾಗದಲ್ಲಿ 3 ಸ್ಟಾರ್‌ಗಳನ್ನು ಚಿತ್ರಿಸಲಾಗಿದ್ದು. ಈ ಸ್ಟಾರ್‌ಗಳು ಸಿಎಸ್‍ಕೆ ತಂಡ ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವುದರ ದ್ಯೋತಕವಾಗಿದೆ. ಎದೆಯ ಭಾಗದಲ್ಲಿ ಸಿಎಸ್‍ಕೆ ತಂಡದ ಲಾಂಛನ ಇದೆ. ನೂತನ ಸಮವಸ್ತ್ರದಲ್ಲಿ ಮಿಂತ್ರಾ, ಗಲ್ಫ್, ನಿಪ್ಪಾನ್ ಪೇಂಟ್ಸ್, ಆಸ್ಟ್ರಲ್ ಪೈಪ್ಸ್ ಮತ್ತು ಎಸ್‍ಎನ್‍ಜೆ ಕಂಪನಿಗಳ ಹೆಸರಿದ್ದು ಇವುಗಳು ಸಿಎಸ್‍ಕೆ ತಂಡದ ಪ್ರಮುಖ ಪ್ರಯೋಜಕತ್ವವನ್ನು ಪಡೆದುಕೊಂಡಿದೆ.

CSK TEAM

ಸಿಎಸ್‍ಕೆ ತಂಡ ಈ ವರೆಗೆ 11 ಬಾರಿ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿದ್ದು ಇದರಲ್ಲಿ 2010, 2011 ಮತ್ತು 2018 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಹಾಗೆ 10 ಬಾರಿ ನಾಕ್‍ಔಟ್ ಪ್ರವೇಶಿಸಿ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದೆ. ಆದರೆ ಕಳೆದ ಬಾರಿ ಯುಎಇಯಲ್ಲಿ ನಡೆದ ಐಪಿಎಲ್‍ನಲ್ಲಿ ಲೀಗ್ ಹಂತದಲ್ಲೇ ಹೊರ ಬಿದ್ದು ನಿರಾಸೆ ಮೂಡಿಸಿತ್ತು ಈ ಬಾರಿ ಮತ್ತೆ ಹೊಸ ಹುರುಪಿನೊಂದಿಗೆ ಮೈದಾನಕ್ಕಿಳಿಯಲು ತಯಾರಿ ಮಾಡಿಕೊಳ್ಳುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *