ಸೇತುವೆ ಕುಸಿತ- ಪ್ರಾಣದ ಹಂಗು ತೊರೆದು ಹಳ್ಳ ದಾಟುತ್ತಿರುವ ಜನ

Public TV
1 Min Read
bly lake

ಬಳ್ಳಾರಿ: ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯುಂಟಾಗಿದ್ದು, ಅದೇ ರೀತಿ ಕರ್ನಾಟಕ ಹಾಗೂ ಆಂಧ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ. ಜನ ಪ್ರಾಣದ ಹಂಗು ತೊರೆದು ರಭಸವಾಗಿ ಹರಿಯುವ ಹಳ್ಳವನ್ನೇ ತಾಟಿ ತಮ್ಮೂರಿಗೆ ತೆರಳುತ್ತಿದ್ದಾರೆ.

ಪ್ರತಿ ಸಲ ಮಳೆ ಬಂದಾಗ ಕರ್ನಾಟಕ ಮತ್ತು ಆಂಧ್ರ ಪ್ರದೇಶಕ್ಕೆ ಸಂಪರ್ಕಿಸುವ ಈ ಹಳ್ಳ ದಾಟಲು ಜನ ಪ್ರಾಣವನ್ನೇ ಪಣಕ್ಕೆ ಇಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಬಳಿಯಿರುವ ಯಲ್ಲಮ್ಮನಹಳ್ಳ ತುಂಬಿ ಹರಿಯುತಿದ್ದು, ಕಳೆದ ವಾರ ಸುರಿದ ಮಳೆಯಿಂದಾಗಿ ತಾತ್ಕಾಲಿಕ ಸೇತುವೆ ಕುಸಿದ ಪರಿಣಾಮ ಈ ಸ್ಥಿತಿ ನಿರ್ಮಾಣವಾಗಿದೆ.

vlcsnap 2020 10 01 17h17m40s774

ರಾಜ್ಯ ಹೆದ್ದಾರಿಯ ಮುಖ್ಯ ರಸ್ತೆ ಮತ್ತು ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ರಾರಾವಿಯಿಂದ ಸಿರಗುಪ್ಪಕ್ಕೆ ಕೂಲಿಕಾರ್ಮಿಕರು ದಿನನಿತ್ಯ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದಾರೆ. ನಿತ್ಯ ಪ್ರಾಣದ ಹಂಗು ತೊರೆದು ಸೇತುವೆ ದಾಟುತ್ತಿದ್ದಾರೆ.

ಮಳೆಯಿಂದಾಗಿ ನಿರ್ಮಾಣ ಹಂತದ ಸೇತುವೆ ಕೆಲವೆಡೆ ಈಗಾಗಲೇ ಕುಸಿದಿದೆ. ತಾತ್ಕಾಲಿಕ ಸೇತುವೆ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದೆ. ಪರಿಣಾಮ ನಿತ್ಯ ಜೀವ ಕೈಯಲ್ಲಿ ಹಿಡಿದು ಹಳ್ಳ ದಾಟಬೇಕಿದೆ. ಕೂಲಿ ಕಾರ್ಮಿಕರು ಕೂಲಿಗೆ ಹೋಗಬೇಕಾದರೆ ನಿತ್ಯ ಇದೇ ಗೋಳು ಎನ್ನುವಂತಾಗಿದೆ. ಸ್ವಲ್ಪ ಮಳೆ ಬಂದರೂ ಈ ಹಳ್ಳ ತುಂಬಿ ಹರಿಯುತ್ತದೆ. ನೀರಿನಲ್ಲಿ ಕೊಚ್ಚಿ ಹೋದರೆ ಯಾರೂ ಹೊಣೆ ಎಂದು ಕೂಲಿ ಕಾರ್ಮಿಕರು ಪ್ರಶ್ನಿಸುತ್ತಿದ್ದಾರೆ.

vlcsnap 2020 10 01 17h17m10s352

ಪರ್ಯಾಯ ಮಾರ್ಗದ ಮೂಲಕ ದಡ ಸೇರಬೇಕೆಂದರೆ, 15 ಕಿ.ಮೀ. ಸುತ್ತುವರೆದು ಹೋಗಬೇಕು. ಕೂಲಿ ಕೆಲಸಕ್ಕೆ ಹೋಗುವುದು ಹಾಗೂ ಮನೆಗೆ ಮರಳುವುದು ತಡವಾಗುತ್ತದೆ. ಹೀಗಾಗಿ ಕೂಡಲೇ ತಾತ್ಕಾಲಿಕ ಸೇತುವೆ ಮರು ನಿರ್ಮಾಣ ಮಾಡುವಂತೆ ಜನ ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *