– ಪ್ರತಿ ಸೀಟಿನ ನಡುವೆ ಗ್ಲಾಸ್ ಶೀಟ್ ವ್ಯವಸ್ಥೆ
ಬೆಂಗಳೂರು: ಸೆಪ್ಟೆಂಬರ್ 21 ರಿಂದ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ ಕಾಗೇರಿ ಅವರು, ಸೆ. 21ರ ಬೆಳಗ್ಗೆ 11 ಗಂಟೆಗೆ ಅಧಿವೇಶನ ಪ್ರಾರಂಭವಾಗುತ್ತೆ. ಕೊರೊನಾ ಹಿನ್ನೆಲೆ ಅಧಿವೇಶನದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಸಿಎಂ, ಸಚಿವರು, ಶಾಸಕರು, ಅಧಿಕಾರಿಗಳಿಗೂ ಕೊರೊನಾ ಸೋಂಕು ಬಂದಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.
Advertisement
Advertisement
ಅಧಿವೇಶನ ನಡೆಸುವ ಕುರಿತು ಅನೇಕ ಮಾರ್ಗಸೂಚಿಗಳನ್ನು ಮಾಡಲಾಗಿದೆ. ವಿಧಾನಸೌಧದಲ್ಲಿ ಅಧಿವೇಶನ ನಡೆಯಲಿದ್ದು, ಸಾಮಾಜಿಕ ಅಂತರದಲ್ಲಿ ಸೀಟುಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಆಸನಗಳಿಗೆ ಗ್ಲಾಸ್ ಶೀಟ್ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳು, ಮಾಧ್ಯಮದವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಏನು ಕ್ರಮ ಆಗಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.
Advertisement
ಈ ಬಾರಿ ಅಧಿವೇಶನಕ್ಕೆ ಸಾರ್ವಜನಿಕರ ಪ್ರವೇಶ ಇರುವುದಿಲ್ಲ. ಶಾಸಕರಿಗೆ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್ ನೀಡುವುದು ಸೇರಿದಂತೆ ಎಲ್ಲಾ ಕ್ರಮ ತೆಗೆದುಕೊಳ್ತಿದ್ದೇವೆ. ಅಲ್ಲದೇ ಎಲ್ಲರೂ ಮಾಸ್ಕ್, ಫೇಸ್ ಶೀಲ್ಡ್ ಹಾಕುವುದು ಕಡ್ಡಾಯ ಮಾಡಲಾಗಿದೆ. ಎಲ್ಲರಿಗೂ ನಾವು ಮಾಸ್ಕ್, ಫೇಸ್ ಶೀಲ್ಡ್ ನೀಡುತ್ತೇವೆ. ಎಲ್ಲರೂ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದರು.
Advertisement
ಕಲಾಪ ಎಂದಿನಂತೆ ನಡೆಯಲಿದ್ದು, ಪ್ರಶ್ನೋತ್ತರ, ಶೂನ್ಯ ವೇಳೆ, ಗಮನ ಸೆಳೆಯುವ ಪ್ರಶ್ನೆ ಸೇರಿದಂತೆ ಎಲ್ಲಾ ವಿಧಾನಗಳು ಇರುತ್ತೆ. ಈ ಅಧಿವೇಶನದಲ್ಲಿ ಮಂಡಿಸಲು 10 ಹೊಸ ಬಿಲ್‍ಗಳು ನಮ್ಮ ಬಳಿ ಇದ್ದು, ಸುಗ್ರೀವಾಜ್ಞೆ ಹೊರಡಿಸಿರುವ 19 ಬಿಲ್‍ಗಳಿದೆ. ಅಲ್ಲದೇ ಪರ್ಯಾಲೋಚನೆ ಮತ್ತು ಅಂಗೀಕಾರಕ್ಕೆ ಎರಡು ವಿಧೇಯಕ ಸೇರಿದಂತೆ ಒಟ್ಟು 31 ಬಿಲ್ ಈ ಅಧಿವೇಶನದಲ್ಲಿ ಅಂಗೀಕಾರ ಆಗಬೇಕು ಎಂದರು ವಿವರಿಸಿದರು.
ಸಚಿವರು ಗನ್ ಮ್ಯಾನ್ ಹಾಗೂ ಅವರ ಪಿಎಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ವಿಧಾನಸೌಧದ ಹೊಟೇಲ್ ಹೊರಗೆ ಶಿಫ್ಟ್ ಮಾಡಲಾಗಿದೆ. ಅಧಿಕಾರಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಸೇರಿದಂತೆ ಪತ್ರಕರ್ತರ ಗ್ಯಾಲರಿಗೆ ಸಿಮೀತ ಜನರಿಗೆ ಅವಕಾಶ ನೀಡಲು ವಾರ್ತಾ ಇಲಾಖೆ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡುತ್ತೇವೆ ಎಂದರು.
ಗ್ಯಾಲರಿಯಲ್ಲಿ ಮೀಡಿಯಾ ಶಿಫ್ಟ್ ಮಾಡೋ ಚಿಂತನೆ ಇದ್ದು, ಯಾವುದೇ ನಿರ್ಣಯ ಮಾಡಿದರೂ ಮಾಧ್ಯಮಗಳ ಸಹಕಾರ ಕೊಡಬೇಕು ಎಂದು ಕಾಗೇರಿ ಅವರು ಮನವಿ ಮಾಡಿದರು. ಅಲ್ಲದೇ ಎಲ್ಲರೂ ಕೊರೊನಾ ಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕು. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿರುವವರು ಕೂಡ ಟೆಸ್ಟ್ ಮಾಡಿಸುವುದು ಕಡ್ಡಾಯ. ಇಂತಹ ಟೆಸ್ಟ್ ಗಳ ವರದಿ ಶೀಘ್ರವೇ ವರದಿ ಬರುವಂತೆ ಮಾಡಲು ಕ್ರಮಕೈಗೊಳ್ಳುತ್ತೇವೆ ಎಂದರು.
ಸಚಿವರನ್ನು ಭೇಟಿ ಮಾಡುವ ನಿಯೋಗಗಳಿಗೆ ಅಧಿವೇಶನ ಜಾಗದಲ್ಲಿ ಈ ಬಾರಿ ಅವಕಾಶ ನೀಡಲಾಗುವುದಿಲ್ಲ. ಸಚಿವರನ್ನು ಶಾಸಕರ ಭವನದಲ್ಲಿ ನಿಯೋಗಗಳು ಭೇಟಿ ಮಾಡಬೇಕು ಅಥವಾ ವಿಧಾನಸೌಧದ ಸಚಿವರ ಕೊಠಡಿಯಲ್ಲಿ ಭೇಟಿ ಮಾಡಬೇಕು ಎಂದು ಸೂಚಿಸಿದರು.
ವಿಧಾನಸೌಧದಲ್ಲಿ ಧರಣಿ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರಿಗೂ ಕೊರೊನಾ ಇದೆ ಗೊತ್ತಿಲ್ಲ. ಹೇಗೆ ಪ್ರತಿಭಟನೆ ಮಾಡಬೇಕು ಅಂತಾ ಅವರೇ ನಿರ್ಧಾರ ಮಾಡಬೇಕು. ನಾವು ಹೀಗೆ ಮಾಡಿ ಎಂದು ಹೇಳಲು ಆಗೋದಿಲ್ಲ ಎಂದರು. ಅಲ್ಲದೇ 70 ವರ್ಷ ಮೇಲ್ಪಟ್ಟವರಿಗೆ ಅಧಿವೇಶನಕ್ಕೆ ಅವಕಾಶ ವಿಚಾರವಾಗಿ, ವಯಸ್ಸು ಹೆಚ್ಚಳ ಇರುವವರ ಪಟ್ಟಿ ಮಾಡಲಾಗಿದೆ. ಅವರಿಗೆ ವಿಶೇಷ ಕಾಳಜಿಯನ್ನು ಮಾಡುತ್ತೇವೆ. ಇದಕ್ಕೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.