– ಶನಿವಾರ ಫುಲ್ ಡೇ ನಡೆಯುತ್ತಾ ಕ್ಲಾಸ್
ಬೆಂಗಳೂರು: ಕೊರೊನಾ ಸೋಂಕಿನ ಜೊತೆ ಜೊತೆಗೆ ಬದುಕುವ ಸಿದ್ಧತೆಗಳ ನಡುವೆಯೇ ಅನ್‍ಲಾಕ್ 4.0 ನಲ್ಲಿ ಶಾಲೆ-ಕಾಲೇಜು ಓಪನ್ ಆಗುತ್ತಾ ಎಂಬ ಪ್ರಶ್ನೆ ಮೂಡಿದೆ. ದೇಶದಲ್ಲಿ ಮೂರನೇ ಹಂತದ ಅನ್‍ಲಾಕ್ ನಿಯಮಗಳ ಅಂತ್ಯದಲ್ಲಿದ್ದು, ಸೆಪ್ಟೆಂಬರ್ 1 ರಿಂದ 4ನೇ ಹಂತದ ಅನ್‍ಲಾಕ್ ಮಾರ್ಗಸೂಚಿಗಳು ಜಾರಿಯಾಗಲಿದೆ. ಕೇಂದ್ರ ಸರ್ಕಾರ ಈ ಬಾರಿ ಯಾವುದಕ್ಕೆಲ್ಲ ವಿನಾಯಿತಿ ನೀಡಲಿದೆ ಎಂಬ ಲೆಕ್ಕಾಚಾರವೂ ಆರಂಭವಾಗಿದೆ. ಇದರ ನಡುವೆಯೇ ಶಾಲೆ ಆರಂಭಿಸಲು ಶೈಕ್ಷಣಿಕ ವರ್ಷದ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ.
ಅನ್‍ಲಾಕ್ 4.0ನಲ್ಲಿ ಹಂತ ಹಂತವಾಗಿ ಶಾಲೆ ಕಾಲೇಜು ತೆರೆಯುವ ಸಾಧ್ಯತೆ ಇದ್ದು, ಸೆಪ್ಟೆಂಬರ್ 1 ರಿಂದ ಪದವಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸ್ ಆರಂಭವಾಗಲಿದೆ. ಅಕ್ಟೋಬರ್ 1 ರಿಂದ ಪದವಿ ಕಾಲೇಜುಗಳು ಓಪನ್ ಆಗಲಿದೆ. ಇದರಂತೆ ಪದವಿ, ಪಿಯು, ಹೈಸ್ಕೂಲ್ ಬಳಿಕ ಪ್ರಾಥಮಿಕ ಶಾಲೆ ತೆರೆಯುವ ಚಿಂತನೆ ಮಾಡಲಾಗಿದೆ.
ಸಾಮಾನ್ಯ ವರ್ಷಗಳಲ್ಲಿ ಈ ವೇಳೆಗೆ ಶಾಲೆಗಳು ವರ್ಷದ ಅರ್ಧ ಅವಧಿಯನ್ನು ಪೂರ್ಣಗೊಳಿಸಬೇಕಿತ್ತು. ಆದರೆ ಈ ಬಾರಿ ಕಡಿಮೆ ಅವಧಿಯ ಶೈಕ್ಷಣಿಕ ವರ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರದ ಹೊಸ ಯೋಜನೆಯನ್ನು ಸಿದ್ಧಪಡಿಸಿದೆ. ಈಗಾಗಲೇ 4-5 ತಿಂಗಳು ಶಾಲೆ ಆರಂಭ ತಡವಾಗಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಪಠ್ಯ ಬೋಧನೆ ಅಸಾಧ್ಯವಾಗಿದ್ದು, ಒಟ್ಟಾರೆ ಪಠ್ಯದಲ್ಲಿ ಶೇ.30ರಷ್ಟು ಕಡಿತ ಮಾಡಿ ಮಕ್ಕಳಿಗೆ ಅತ್ಯಗತ್ಯವಾದ ಪಠ್ಯ ಮಾತ್ರ ಉಳಿಸಿಕೊಳ್ಳಲು ಚಿಂತನೆ ಮಾಡಲಾಗಿದೆ. ಪಠ್ಯ ಕಡಿತ ಸಮಿತಿ ವರದಿ ಬಳಿಕ ಅಂತಿಮ ರೂಪುರೇಷೆ ಲಭಿಸಲಿದೆ.
ಉಳಿದಂತೆ ಶೈಕ್ಷಣಿಕ ವರ್ಷದ ಅವಧಿ ಕಡಿಯಾದ ಹಿನ್ನೆಲೆಯಲ್ಲಿ ಕಳೆದು ಹೋದ ಅವಧಿ ಸರಿದೂಗಿಸಲು ಶನಿವಾರ ಫುಲ್ ಕ್ಲಾಸ್ ಮಾಡುವ ಚಿಂತನೆ ಇದೆ. ಈ ಹೆಚ್ಚುವರಿ ಅವಧಿಯಲ್ಲಿ ನಿಗದಿತ ಪಠ್ಯ ಮುಗಿಸುವ ಯೋಜನೆ ಮಾಡಲಾಗಿದೆ. ಇದರೊಂದಿಗೆ ಅನೇಕ ಮಹಾ ಪುರುಷರ ಜಯಂತಿಗೆ ನೀಡಲಾಗುವ ರಜೆ ರದ್ದು ಮಾಡಿ ಈ ಸಮಯವನ್ನು ಬೋಧನೆಗೆ ಬಳಸುವ ಪ್ಲಾನ್ ಮಾಡಲಾಗಿದೆ.
ಶಾಲೆಗಳು ನಿಗದಿಯಂತೆ ನಡೆದಿದ್ದರೆ ಅನೇಕ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಈ ಎಲ್ಲಾ ಪರೀಕ್ಷೆ ಬದಲು ಮಿತವಾದ ಪರೀಕ್ಷೆ ನಡೆಸಲು ಚಿಂತಿಸಲಾಗಿದೆ. ಕಿರುಪರೀಕ್ಷೆ, ಮಧ್ಯ ವಾರ್ಷಿಕ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಕೈಬಿಟ್ಟು ಮಿತವಾದ ಪರೀಕ್ಷಾ ಪದ್ಧತಿ ಆಳವಡಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಶಿಕ್ಷಣ ಇಲಾಖೆ ಮೂಲಗಳಿಂದ ಮಾಹಿತಿ ಲಭಿಸಿದೆ.