ಮುಂಬೈ: ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ 2020ರ ಟಿ20 ವಿಶ್ವಕಪ್ ಟೂರ್ನಿಯನ್ನು ಐಸಿಸಿ ಮುಂದೂಡಿದ ಬೆನ್ನಲ್ಲೇ ಐಪಿಎಲ್ ಆರಂಭಕ್ಕಾಗಿ ಕ್ರಿಕೆಟ್ ಆಭಿಮಾನಿಗಳು ಕಾತುರರಾಗಿದ್ದಾರೆ.
ಟಿ20 ವಿಶ್ವಕಪ್ ಮುಂದೂಡುವುದು ಖಚಿತ ಎಂದು ತಿಳಿದಿದ್ದ ಬಿಸಿಸಿಐ ಐಪಿಎಲ್ ನಡೆಯುವ ವೇದಿಕೆ ಹಾಗೂ ದಿನಾಂಕವನ್ನು ನಿಗದಿ ಮಾಡುವ ಕಾರ್ಯದಲ್ಲಿ ಬ್ಯುಸಿಯಾಗಿತ್ತು. ಅಲ್ಲದೇ ಫ್ರಾಂಚೈಸಿಗಳಿಗೆ ಸೆ.26 ರಿಂದ ನ.8 ಅವಧಿಯಲ್ಲಿ ಯುಎಇ ನಲ್ಲಿ ಟೂರ್ನಿ ಆಯೋಜಿಸುವ ಕುರಿತು ಮಾಹಿತಿ ನೀಡಿದೆ ಎನ್ನಲಾಗಿದೆ. ಆದರೆ ಆಟಗಾರರ ವೀಸಾ, ಪ್ರಯಾಣಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ಅನುಮತಿಗಾಗಿ ಬಿಸಿಸಿಐ ಕಾಯುತ್ತಿದೆ. ಸರ್ಕಾರ ಅನುಮತಿ ನೀಡಿದ ಕೂಡಲೇ ಐಪಿಎಲ್ ಆರಂಭವಾಗುವ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ.
Advertisement
Advertisement
2020ರ ಆವೃತ್ತಿಯನ್ನು 44 ದಿನಗಳ ಅವಧಿಯಲ್ಲಿ 60 ಪಂದ್ಯಗಳನ್ನು ನಿರ್ವಹಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಆದರೆ ಟೂರ್ನಿಯ ಅವಧಿಯನ್ನು ಮತ್ತೊಂದು ವಾರ ವಿಸ್ತರಿಸಲು ಟೂರ್ನಿಯ ಪ್ರಸಾರ ಹಕ್ಕುಗಳನ್ನು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ಬೇಡಿಕೆ ಇಟ್ಟಿದೆ. ಏಕೆಂದರೆ ನ.15ರ ವರೆಗೂ ಟೂರ್ನಿ ನಡೆದರೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮತ್ತಷ್ಟು ಜಾಹೀರಾತು ಪಡೆಯುವುದು ವಾಹಿನಿಯ ಉದ್ದೇಶವಾಗಿದೆ. ಆದರೆ ವಾಹಿನಿಯ ಬೇಡಿಕೆಗೆ ಬಿಸಿಸಿಐ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ ಎಂಬ ಮಾಹಿತಿ ಲಭಿಸಿದೆ.
Advertisement
Advertisement
ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಬೇಡಿಕೆಗೆ ಬಿಸಿಸಿಐ ಒಪ್ಪಿಗೆ ಸೂಚಿಸದಿರಲು ಪ್ರಮುಖ ಕಾರಣವಿದ್ದು, ನ.15ರ ವರೆಗೂ ಟೂರ್ನಿ ನಡೆದರೆ ಡಿ.3 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಗೆ ಆಟಗಾರರು ಸಿದ್ಧತೆ ನಡೆಸಲು ಕಡಿಮೆ ಸಮಯದ ಲಭಿಸಲಿದೆ. ಇತ್ತ ಕೇಂದ್ರ ಯುಎಇನಲ್ಲಿ ಟೂರ್ನಿ ನಡೆಸಲು ಕೇಂದ್ರ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಆಟಗಾರರಿಗೆ ಅಲ್ಲಿ ಕ್ಯಾಂಪ್ ಪ್ರಾರಂಭಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಮುಂದಿನ ವಾರ ಬಿಸಿಸಿಐ ಆಡಳಿತ ಸಮಿತಿ ಸಭೆ ನಡೆಯಲಿದ್ದು, 2020ರ ಐಪಿಎಲ್ ಆವೃತ್ತಿಯ ಶೆಡ್ಯೂಲ್ ಹಾಗೂ ಎಲ್ಲಿ ಟೂರ್ನಿ ನಡೆಯಬೇಕು ಎಂಬ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ನಡೆಯಲಿದೆ.