ಸೃಜನ್ ಜೊತೆಗಿನ ಮದುವೆ ಮುರಿದಿದ್ದಕ್ಕೆ ವಿಜಯಲಕ್ಷ್ಮಿ ಸ್ಪಷ್ಟನೆ

Public TV
4 Min Read
VIJALAKSHMI

ಬೆಂಗಳೂರು: ಸದಾ ಫೇಸ್‍ಬುಕ್ ಲೈವ್ ಬಂದು ತಮ್ಮ ಕಷ್ಟ-ಕಾರ್ಪಣ್ಯಗಳನ್ನು ಹೇಳಿಕೊಂಡು ಕಣ್ಣೀರು ಹಾಕುತ್ತಿರುವ ನಟಿ ವಿಜಯಲಕ್ಷ್ಮಿ ಇದೀಗ ಮತ್ತೆ ವೀಡಿಯೋ ಹರಿ ಬಿಟ್ಟಿದ್ದಾರೆ. ಈ ಬಾರಿ ನಟ ಸೃಜನ್ ಲೋಕೇಶ್ ಜೊತೆಗಿನ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.

ಹೌದು. ಈ ಹಿಂದೆ ನಟಿ ಲೈವ್ ಗೆ ಬಂದು ಕಣ್ಣೀರಾಕಿದ್ದ ಸಂದರ್ಭದಲ್ಲಿ ಅನೇಕ ಮಂದಿ ಸೃಜನ್ ಗೆ ಮೋಸ ಮಾಡಿ ಬೀದಿಗೆ ಬಂದಿರುವುದಾಗಿ ಕಾಮೆಂಟ್ ಮಾಡಿದ್ದರು. ಈ ವಿಚಾರ ಸಂಬಂಧ ಇದೀಗ ವಿಜಯಲಕ್ಷ್ಮಿ ಅವರೇ ಲೈವ್ ಗೆ ಬಂದು ಅಂತೆ-ಕಂತೆಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ.

Srujan Lokesh chiru 2

ಲೈವ್ ನಲ್ಲಿ ನಟಿ ಹೇಳಿದ್ದೇನು..?
ಇತ್ತೀಚೆಗೆ ನನ್ನ ಹಾಗೂ ಸೃಜನ್ ಲೋಕೇಶ್ ಬಗ್ಗೆ ಬಹಳಷ್ಟು ವಿಚಾರಗಳು ಹರಿದಾಡುತ್ತಿದೆ. ನಾನು ಮತ್ತೆ ಕರ್ನಾಟಕಕ್ಕೆ ಬರುತ್ತಿದ್ದೇನೆ ಅಂದಾಗ ‘ಸೃಜನ್ ಗೆ ಯಾಮಾರಿಸಿದ್ದಕ್ಕೆ ಬೀದಿಗೆ ಬಂದ್ಬಿಟ್ಟೆ’ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಾಗಮಂಡಲ ಚಿತ್ರದ ಕ್ಲೈಮಾಕ್ಸ್ ನಲ್ಲಿ ‘ನೀವು ನನ್ನ ಪ್ರೀತಿಸಿದಾಗ ನಾನು ಗುಬ್ಬಿಯಾಗಿದ್ದೆ, ಆದ್ರೆ ಈವಾಗ ನನಗೆ ಎಲ್ಲಾ ಗೊತ್ತಾಗುತ್ತಿದೆ. ನನಗೆ ಉತ್ತರ ಕೊಡಿ’ ಎಂದು ನಾಗಪ್ಪ ಬಳಿ ಕೇಳುವ ಒಂದು ಸನ್ನಿವೇಶ ಬರುತ್ತದೆ. ಇದೇ ರೀತಿ ಈಗ ನನ್ನ ಜೀವನದಲ್ಲಿ ಆಗಿದೆ. 20 ವರ್ಷ ನನ್ನ ಬಗ್ಗೆ ಏನೇನೋ ವಿವಾದಗಳು ಆಗಿವೆ. ಆದರೂ ಸುಮ್ಮನಿದ್ದೆ. ಈಗ ನನ್ನ ಜೀವನ ಕ್ಲೈಮಾಕ್ಸ್ ಹಂತಕ್ಕೆ ಬಂದು ತಲುಪಿದೆ. ಈಗ ನನಗೆ 39 ವರ್ಷ ವಯಸ್ಸಾಗಿದ್ದು, ನಾನು ಚಿಕ್ಕ ಮಗುವಲ್ಲ ಮಹಿಳೆಯಾಗಿದ್ದೇನೆ. ನನ್ನ ಜೀವನದಲ್ಲಿ ಏನೇನು ಆಗಿದೆ ಎಂಬುದು ಹಿರಿಯರಿಗೆ ತಿಳಿದಿದ್ದು, ಹೀಗಾಗಿ ಅವರು ಕೂಡ ನನ್ನ ಮಾತುಗಳನ್ನು ಒಪ್ಪಿಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

vijayalakshmi medium

ನನ್ನ ಮಾತೃ ಭಾಷೆ ತಮಿಳು. ಆದರೆ ನಾನು ಹುಟ್ಟಿದ್ದು ಕರ್ನಾಟಕದಲ್ಲಿ, ಯಶವಂಪುರದಲ್ಲಿರುವ ಮನೆಯಲ್ಲಿ. ನಾಗಮಂಡಲದ ಮೂಲಕ ನಾನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದೇನೆ. ಒಟ್ಟಿನಲ್ಲಿ ನನ್ನ ಫೌಂಡೇಶನ್ ಕರ್ನಾಟಕದಲ್ಲಿ. ಫ್ರೆಂಡ್ಸ್ ಅನ್ನೋ ತಮಿಳೂ ಚಿತ್ರದ ಮೂಲಕ ನನ್ನ ಜೀವನ ಪ್ರಾರಂಭವಾಗಿದೆ. ಇಂದಿಗೂ ಎಲ್ಲರೂ ನನ್ನ ಬೆಂಗಳೂರು ವಿಜಯಲಕ್ಷ್ಮಿ ಅಂತಾನೆ ರೆಫರ್ ಮಾಡುತ್ತಾರೆ ಎಂದರು.

vijayalakshmi 2

ಎಲ್ಲರೂ ಸೃಜನ್ ಯಾಮಾರಿಸಿಬಿಟ್ಟಳು, ಬೀದಿಯಲ್ಲಿ ನಿಂತಳು ಅಂತ ಮಾತಾಡ್ತಾರೆ. ಆದರೆ ಯಾವ ಬೀದಿಯಲ್ಲಿ ನಿಂತಿದ್ದೀನಿ ಅನ್ನೋದು ನನಗೆ ಗೊತ್ತಾಗಬೇಕಿದೆ. ಲಕ್ಷ ಲಕ್ಷ ಖರ್ಚು ಮಾಡಿ ಚೆನ್ನೈನಲ್ಲಿ ಎಂಗೇಜ್ಮೆಂಟ್ ಅನ್ನು ನಾವೇ ಮಾಡಿಸಿದ್ವಿ. ನಿಶ್ಚಿತಾರ್ಥಕ್ಕೆ ಸಿದ್ಧತೆ ಮಾಡುತ್ತಿರುವ ಸಂದರ್ಭದಲ್ಲಿ ‘ಹೋ ನೀವು ತಮಿಳುರು ಅಲ್ವಾ.. ನಾವು ಕನ್ನಡದವರು..’ ಅನ್ನೋ ಮಾತುಗಳು ಬಹಳಷ್ಟು ಬಾರಿ ಪ್ರಸ್ತಾಪ ಆಯಿತು. ಪ್ರತಿನಿತ್ಯ ಈ ವಿಚಾರದಲ್ಲಿಯೇ ಮಾತಿಗೆ ಮಾತು ಬೆಳೆಯುತ್ತಿತ್ತು. ಆದರೆ ನನ್ನ ಹಾಗೂ ಸೃಜನ್ ನಡುವಿನ ಸಂಬಂಧದಲ್ಲಿ ಯಾವುದೇ ಬಿರುಕು ಮೂಡಿರಲಿಲ್ಲ. ಯಾಕಂದ್ರೆ ನಾವಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದೆವು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೇಘನಾ, ಜೂ. ಚಿರುವಿಗೆ ಆಂಜನೇಯನ ದರ್ಶನ ಮಾಡಿಸಿದ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ!

srujan lokesh

ನಮ್ಮ ಅಪ್ಪ ತೀರಿಕೊಂಡ ಸಂದರ್ಭದಲ್ಲಿ ಮನೆಯಲ್ಲಿ ನಾವು ಮೂವರು ಹುಡುಗಿಯರು ಕಷ್ಟಪಡುತ್ತಿರುವುದನ್ನು ಕಂಡ ಸೃಜನ್, ಮದುವೆ ಮಾಡಿಕೊಳ್ಳಬೇಕು ಎಂಬ ಒಳ್ಳೆಯ ಉದ್ದೇಶದಿಂದಲೇ ಬಂದಿದ್ದರು. ಹೀಗಾಗಿ ನಮ್ಮಿಬ್ಬರ ಮಧ್ಯೆ ಭಾಷೆಯ ಬಗ್ಗೆ ಏನೂ ಇರಲಿಲ್ಲ. ಮದುವೆ ಅಂತ ಬಂದಾಗ ಸಾಮಾನ್ಯವಾಗಿ ಎಲ್ಲಾ ವಿಚಾರಗಳು ಎಲ್ಲರ ಮನೆಯಲ್ಲೂ ಪ್ರಸ್ತಾಪ ಆಗಿಯೇ ಆಗುತ್ತದೆ. ಹಾಗೆಯೇ ನಮ್ಮಲ್ಲೂ ‘ನೀವು ತಮಿಳರಲ್ವಾ…’ ಎಂಬ ಮಾತು ಬಂತು. ಇದನ್ನು ಸರಿ ಮಾಡಲು ಆಗುತ್ತಾ ಅಂತ ತುಂಬಾ ಸಮಯದವರೆಗೆ ನೋಡಿದೆ, ಹೋರಾಡಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಸೃಜನ್ ಹಾಗೂ ನಾನು ಕೂತುಕೊಂಡು ಈ ಬಗ್ಗೆ ಮಾತುಕತೆ ನಡೆಸಿದೆವು. ಈ ವೇಳೆ ಮನೆಯಲ್ಲಿ ಎಲ್ಲರೂ ಏನು ಆಸೆ ಪಡುತ್ತಾರೋ, ಆ ರೀತಿಯಾದ ಹೆಣ್ಣು ಅವರಿಗೆ ಸಿಗಬೇಕು, ಅವರು ಚೆನ್ನಾಗಿರಬೇಕು ಎಂದು ನಾನು ಬಯಸಿದೆ. ಇದನ್ನು ನಾನು ಸ್ವಚ್ಛವಾದ ಪ್ರೀತಿ ಎಂದು ನಾನು ಭಾವಿಸ್ತೀನಿ ಎಂದರು.

vijayalakshmi 2

ನಮಗೊಬ್ಬರು ಸಿಗ್ತಾರೋ, ಇಲ್ಲವೋ ಅನ್ನೋದು ಪ್ರೀತಿಯಲ್ಲ, ಅವರು ಚೆನ್ನಾಗಿರಬೇಕು ಎಂದು ಬಯಸುವುದೇ ನಿಜವಾದ ಪ್ರೀತಿ. ಅಂದು ನಾನು ಕೂಡ ಇದನ್ನೇ ಮಾಡಿದೆ. ಭಾಷೆ ಅನ್ನೋ ವಿಚಾರದಲ್ಲಿ ಮದುವೆಗಿಂತ ಮುಂಚೆನೇ ಕಿರಿಯಾಗುತ್ತಿದೆ ಅಂದ್ರೆ ಬಿಟ್ಟುಬಿಡೋಣ ಎಂದು ನಾನು ಸೃಜನ್ ಅವರ ಮುಂದೆ ಪ್ರಸ್ತಾಪ ಮಾಡಿದೆ. ಅಂದು ನಾನು ಏನು ಅಂದ್ಕೊಂಡೆನೋ ಅದೇ ರೀತಿ ಸೃಜನ್ ಅವರ ಬದುಕು ಈಗ ಸಾಗುತ್ತಿದೆ. ಇದು ನನಗೆ ಖುಷಿ ನೀಡಿದೆ. ಆದರೆ ಜನ ನೀನು ಮಾಡಿದ ಮೋಸದಿಂದ ಬೀದಿಗೆ ಬಂದಿದ್ದೀಯಾ ಅಂತಾರೆ. ಇದು ನನಗೆ ತುಂಬಾ ನೋವು ಕೊಡುತ್ತಿದೆ. ನಾನೇನು ಮೋಸ ಮಾಡಿದೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

vijayalakshmi

ಮನೆಯವರ ಒಪ್ಪಿಗೆ ಇಲ್ಲದೆ ಮದುವೆ ಮಾಡಿಕೊಂಡು, ನಂತರ ಜಗಳ ಮಾಡಿಕೊಂಡು ಆಮೇಲೆ 1 ಕೋಟಿ ಕೊಟ್ಟು ವಿಚ್ಚೇದನ ಕೊಡು ಎಂದು ನಾನು ಜಗಳ ಮಾಡಿಲ್ಲ. ಕರ್ನಾಟಕದ ಎಲ್ಲಾ ನಾಯಕಿಯರ ಜೀವನದಲ್ಲಿಯೂ ಡಿವೋರ್ಸ್ ಗಳಾಗಿವೆ, ಹಾಗೆಯೇ ಮತ್ತೆ ಮರು ಜೀವನ ಆರಂಭಿಸಿದ್ದಾರೆ. ಹಾಗಂತ ಎಲ್ಲಾ ನಟಿಯರ ಬಗ್ಗೆ ಈ ರೀತಿ ಬರೆಯಲ್ಲ. ಆದರೆ ವಿಜಯಲಕ್ಷ್ಮಿ ಬಗ್ಗೆ ಮಾತ್ರ ಈ ರೀತಿ ಬರೆಯುತ್ತೀರಿ ಯಾಕೆ ಎಂದು ಪ್ರಶ್ನಿಸಿದ್ದಾರೆ. ಹೀಗೆ ಅನೇಕ ವಿಚಾರಗಳ ಬಗ್ಗೆ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *