– ಮಗುವಿನ ಡಿಎನ್‍ಎಯಿಂದ ಬಯಲಾಯ್ತು ಯುವತಿಯ ಕಳ್ಳಾಟ
– ಡ್ರೈವಿಂಗ್ ಲೈಸನ್ಸ್ ಸಿಗದೇ ಪರದಾಡಿದ್ದ ನಿರಪರಾಧಿ
ಚೆನ್ನೈ: 10 ವರ್ಷಗಳ ಕಾಲ ಸುಳ್ಳು ರೇಪ್ ಪ್ರಕರಣದ ವಿರುದ್ಧ ಹೋರಾಡಿದ ಯುವಕನಿಗೆ ಯುವತಿಯು 15 ಲಕ್ಷ ಪರಿಹಾರ ನೀಡುವಂತೆ ಚೆನ್ನೈ ಕೋರ್ಟ್ ಆದೇಶ ನೀಡಿದೆ.
ಆಸ್ತಿ ವಿವಾದ ಮತ್ತು ಕುಟುಂಬ ವೈಷಮ್ಯದ ಹಿನ್ನೆಲೆಯಿಂದ ಯುವತಿ ಮತ್ತು ಆಕೆಯ ಕುಟುಂಬದವರು ಸೇರಿಕೊಂಡು ಎಂಜಿನಿಯರಿಂಗ್ ಓದುತ್ತಿದ್ದ ಸಂತೋಷ್ ಮೇಲೆ ಸುಳ್ಳು ರೇಪ್ ಕೇಸ್ ಹಾಕಿದ್ದರು. ಈ ಕೇಸಿನಲ್ಲಿ ಸಂತೋಷ್ ನಿರಪರಾಧಿ ಎಂದು 2016ರಲ್ಲಿ ತೀರ್ಪು ಬಂದಿತ್ತು. ನಂತರ ಅವರು ಮಾನನಷ್ಟ ಮೊಕದ್ದಮೆ ಹಾಕಿದ್ದು, ಕೋರ್ಟ್ ಆತನಿಗೆ 15 ಲಕ್ಷ ಪರಿಹಾರ ಕೊಡಿಸಿದೆ.
Advertisement
Advertisement
ಏನಿದು ಪ್ರಕರಣ?
ಸಂತೋಷ್ ಮತ್ತು ಆ ಯುವತಿ ಒಂದೇ ಸಮುದಾಯರಾಗಿದ್ದು, ಅವರಿಬ್ಬರಿಗೂ ಮದುವೆ ಮಾಡಲು ಎಂದು ಎರಡು ಕುಟುಂಬಗಳು ಮಾತನಾಡಿಕೊಂಡಿದ್ದವು. ಎರಡು ಕುಟುಂಬ ಮನೆ ಅಕ್ಕಪಕ್ಕ ಇದ್ದು, ಆಸ್ತಿ ವಿಚಾರಕ್ಕೆ ಎರಡು ಕುಟುಂಬಗಳು ಗಲಾಟೆ ಮಾಡಿಕೊಂಡಿದ್ದವು. ಗಲಾಟೆ ಜಾಸ್ತಿಯಾದ ಕಾರಣ ಸಂತೋಷ್ ಕುಟುಂಬ ಮನೆ ಖಾಲಿ ಮಾಡಿಕೊಂಡು ಬೇರೆ ಕಡೆ ಹೋಗಿತ್ತು.
Advertisement
Advertisement
ಈ ವೇಳೆ ಸಂತೋಷ್ ಎಂಜಿನಿಯರಿಂಗ್ ಓದುತ್ತಿದ್ದರು. ಒಂದು ದಿನ ಸಂತೋಷ್ ಮನೆಗೆ ಬಂದ ಯುವತಿಯ ತಾಯಿ, ನಿಮ್ಮ ಮಗ ನನ್ನ ಮಗಳನ್ನು ಗರ್ಭಿಣಿ ಮಾಡಿದ್ದಾನೆ. ತಕ್ಷಣ ಮದುವೆ ಮಾಡಿಕೊಡಿ ಎಂದು ಜಗಳವಾಡಿದ್ದರು. ಆಗ ಸಂತೋಷ್ ನಾನು ಆ ರೀತಿ ಮಾಡಿಲ್ಲ ಎಂದು ಯುವತಿ ಮನೆಯವರ ಆರೋಪವನ್ನು ತಳ್ಳಿ ಹಾಕಿದ್ದರು. ನಂತರ ಯುವತಿ ಮತ್ತು ಅವರ ಮನೆಯವರು ಸಂತೋಷ್ ವಿರುದ್ಧ ರೇಪ್ ಕೇಸ್ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಸಂತೋಷ್ 95 ದಿನ ನ್ಯಾಯಾಂಗ ಬಂಧನದಲ್ಲಿ ಇದ್ದು, 2010 ಫೆಬ್ರವರಿ 12ರಂದು ಜಾಮೀನು ಪಡೆದು ಹೊರಬಂದಿದ್ದರು. ಈ ವೇಳೆ ಗರ್ಭಿಣಿಯಾಗಿದ್ದ ಯುವತಿ ಮಗುವಿಗೆ ಜನ್ಮ ನೀಡಿದ್ದಳು. ಆ ನಂತರ ಮಗುವಿನ ಡಿಎನ್‍ಎ ಪರೀಕ್ಷೆ ಮಾಡಿದಾಗ ಸಂತೋಷ್ ಮಗುವಿನ ತಂದೆಯಲ್ಲ ಎಂಬುದು ಸಾಬೀತಾಗಿತ್ತು. ಈ ಕೇಸ್ ಮತ್ತೆ ವಿಚಾರಣೆಗೆ ಬಂದಿತು. ಆಗ ಮತ್ತೆ ನ್ಯಾಯಾಲಯ ಡಿಎನ್‍ಎ ಟೆಸ್ಟ್ ಮಾಡಿಸುವಂತೆ ಆದೇಶ ಮಾಡಿತ್ತು. ಆಗ 2016 ಫೆಬ್ರವರಿ 10ರಂದು ಸಂತೋಷ್ ನಿರಪರಾಧಿ ಎಂದು ಚೆನ್ನೈ ಮಹಿಳಾ ಕೋರ್ಟ್ ತೀರ್ಪು ನೀಡಿತ್ತು.
ಪ್ರಕರಣದ ಬಗ್ಗೆ ಮಾತನಾಡಿರುವ ಸಂತೋಷ್, ಆರು ವರ್ಷ ಈ ಪ್ರಕರಣಕ್ಕಾಗಿ ಎರಡು ಲಕ್ಷ ಖರ್ಚು ಮಾಡಿದ್ದೇನೆ. ನನ್ನ ಎಂಜಿನಿಯರಿಂಗ್ ಓದನ್ನು ಅರ್ಧಕ್ಕೆ ಬಿಟ್ಟಿದ್ದೇನೆ. ಈ ಸುಳ್ಳು ಪ್ರಕರಣದಿಂದ ನನಗೆ ಡ್ರೈವಿಂಗ್ ಲೈಸಸ್ಸ್ ಕೂಡ ದೊರಕಿಲ್ಲ. ಎಲ್ಲೂ ಕೆಲಸ ಸಿಗದೇ ಒಂದು ಆಫೀಸಿನಲ್ಲಿ ಪಿಎಯಾಗಿ ಕೆಲಸ ಮಾಡಿದ್ದೇನೆ. ಈ ಕಾರಣದಿಂದ ನಾನು ಯುವತಿ, ಆಕೆಯ ಮನೆಯವರು ಮತ್ತು ತನಿಖೆ ಮಾಡಿದ ಪೊಲೀಸ್ ಅಧಿಕಾರಿ ಮೇಲೆ 30 ಲಕ್ಷ ಮಾನನಷ್ಟ ಮೊಕದ್ದಮೆ ಹೂಡಿದ್ದೆ ಎಂದು ತಿಳಿಸಿದ್ದಾರೆ.