– 20 ವರ್ಷದಲ್ಲಿ ಕುಟುಂಬಸ್ಥರೆಲ್ಲರನ್ನೂ ಕಳೆದಕೊಂಡಿವ ವ್ಯಕ್ತಿ
ಲಕ್ನೋ: ನಕಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿ 20 ವರ್ಷಗಳ ಬಳಿಕ ಇದೀಗ ಬಿಡುಗಡೆಯಾಗಿದ್ದು, ನಿರ್ದೋಷಿ ಎಂದು ಅಲಹಬಾದ್ ಹೈ ಕೋರ್ಟ್ ತೀರ್ಪು ಪ್ರಕಟಿಸಿದೆ. ಅಷ್ಟೊತ್ತಿಗಾಗಲೇ ವ್ಯಕ್ತಿ ಕುಟುಂಬಸ್ಥರೆಲ್ಲರನ್ನೂ ಕಳೆದುಕೊಂಡಿದ್ದಾನೆ.
ಅತ್ಯಾಚಾರ ಪ್ರಕರಣದಲ್ಲಿ ವಿಷ್ಣು ತಿವಾರಿ ನಿರಪರಾಧಿ ಎಂದು ಅಲಹಬಾದ್ ಹೈ ಕೋರ್ಟ್ ತೀರ್ಪು ಪ್ರಕಟಿಸಿದೆ. ತಿವಾರಿ ಶಿಕ್ಷೆಗೆ ಒಳಪಟ್ಟಾಗ 23 ವರ್ಷಗಳಾಗಿತ್ತು. ಸುಳ್ಳು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಲಾಗಿತ್ತು. ತಿವಾರಿ ಅವರಿಗೆ ಉತ್ತಮ ವಕೀಲರು ಸಿಕ್ಕಿರಲಿಲ್ಲ. ಹೀಗಾಗಿ ತಡವಾಗಿ ನಿರಪರಾಧಿ ಎಂದು ಘೋಷಣೆ ಮಾಡಲಾಗಿದೆ.
Advertisement
Advertisement
ನಕಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಿವಾರಿ 20 ವರ್ಷಗಳ ಕಾಲ ಜೈಲಿನಲ್ಲಿ ಕಾಲ ಕಳೆದಿದ್ದು, ಇದೀಗ ತನ್ನೆಲ್ಲ ಕುಟುಂಬಸ್ಥರನ್ನು ಕಳೆದುಕೊಂಡಿದ್ದಾರೆ. ಸದ್ಯದಲ್ಲೇ ವ್ಯಕ್ತಿ ಬಿಡುಗಡೆಯಾಗುತ್ತಿದ್ದು, ಆದರೆ ಮಾಡದ ಅಪರಾಧಕ್ಕೆ ಬರೋಬ್ಬರಿ 20 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದಾರೆ. ಅಧೀಕೃತ ಬಿಡುಗಡೆ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಆಗ್ರಾ ಸೆಂಟ್ರಲ್ ಜೈಲ್‍ನ ಹಿರಿಯ ಅಧಿಕಾರಿ ವಿ.ಕೆ.ಸಿಂಗ್ ಹೇಳಿದ್ದಾರೆ.
Advertisement
ತಿವಾರಿ ಲಲಿತ್‍ಪುರ ನಿವಾಸಿಯಾಗಿದ್ದು, 2000ರಲ್ಲಿ ತಮ್ಮ ಊರಿನಿಂದ 30 ಕಿ.ಮೀ. ದೂರದಲ್ಲಿರುವ ಸಿಲವನ್ ಗ್ರಾಮದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿತ್ತು. ಬಳಿಕ ತಿವಾರಿ ವಿರುದ್ಧ ಐಪಿಸಿಯ ಅತ್ಯಾಚಾರ, ಲೈಂಗಿಕ ಕಿರುಕುಳ, ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಸೆಕ್ಷನ್‍ಗಳಡಿ ಹಾಗೂ ಎಸ್‍ಸಿ, ಎಸ್‍ಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣಾ ನ್ಯಾಯಾಲಯ ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ಪ್ರಕಟಿಸಿತ್ತು.
Advertisement
ಬಳಿಕ 2003ರಲ್ಲಿ ತಿವಾರಿಯವರನ್ನು ಆಗ್ರಾ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿತ್ತು. ತಿವಾರಿ ಸೌಮ್ಯ ಸ್ವಭಾವದ ವ್ಯಕ್ತಿ ಎಂದು ಕುಟುಂಬಸ್ಥರು ನೀಡಿದ ದಾಖಲೆ ಆಧಿರಿಸಿ ಜೈಲಿನ ಅಧೀಕ್ಷಕರು ಬಣ್ಣಿಸಿದ್ದಾರೆ. ತಿವಾರಿ ಖೈದಿಗಳಿಗೆ ಊಟ ತಯಾರಿಸುವುದು, ಜೈಲಿನಲ್ಲಿ ಸ್ವಚ್ಛತಾ ಕಾರ್ಯದ ಮೇಲ್ವಿಚಾರಣೆ ಮಾಡುವ ಕೆಲಸ ಮಾಡುತ್ತಿದ್ದರು.
ತೀರ್ಪು ಪ್ರಶ್ನಿಸಿ 2005ರಲ್ಲಿ ಅಲಹಬಾದ್ ಹೈ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದರು. ಆದರೆ ಆಗ ಅವರ ತಂದೆ ಸಾವನ್ನಪ್ಪಿದ್ದರಿಂದ ಮತ್ತೆ ಭೇಟಿಯಾಗಲು ಸಾಧ್ಯವಾಗಲಿಲ್ಲ. ಮತ್ತೆ ಹೊಡೆತ ಬಿದ್ದಂತಾಯಿತು. ಬಳಿಕ ಜೈಲು ಅಧಿಕಾರಿಗಳೇ ಸ್ಟೇಟ್ ಲೀಗಲ್ ಸರ್ವಿಸ್ ಅಥಾರಿಟಿಯನ್ನು ಸಂಪರ್ಕಿಸಿ, 2020ರಲ್ಲಿ ಹೈ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಜನವರಿಯಲ್ಲಿ ನ್ಯಾಯಮೂರ್ತಿಗಳಾದ ಕೌಶಲ್ ಜಯೇಂದ್ರ ಠಾಕರ್ ಹಾಗೂ ಗೌತಮ್ ಚೌಧರಿ ಅವರಿದ್ದ ಪೀಠ ತಿವಾರಿಯವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.
3 ದಿನ ತಡವಾಗಿ ಎಫ್‍ಐಆರ್ ದಾಖಲಿಸಲಾಗಿದೆ. ಅಲ್ಲದೆ ಸಂತ್ರಸ್ತೆ ಖಾಸಗಿ ಅಂಗದಲ್ಲಿ ಯಾವುದೇ ರೀತಿಯ ಗಾಯಗಳಾಗಿಲ್ಲ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಉದ್ದೇಶಪೂರ್ವಕವಾಗಿ ಈ ರೀತಿ ದೂರು ನೀಡಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.