ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕದಲ್ಲಿ ಬೆಂಗಳೂರು ನಗರಕ್ಕೆ ಅಗ್ರಸ್ಥಾನ: ಅಶ್ವತ್ಥ ನಾರಾಯಣ

Public TV
3 Min Read
ashwath narayan 1 1 e1615026642868

– ರಾಜಧಾನಿ ಬೆಳವಣಿಗೆಗೆ ಕ್ರಾಂತಿಕಾರಕ ಪರಿಕಲ್ಪನೆಗಳನ್ನ ಬಿಚ್ಚಿಟ್ಟ ಡಿಸಿಎಂ

ಬೆಂಗಳೂರು: ಇಡೀ ದೇಶದಲ್ಲಿ ಬೆಂಗಳೂರು ಮಹಾನಗರ ಅತ್ಯುತ್ತಮ ವಾಸಯೋಗ್ಯ ನಗರ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಬೆನ್ನಲ್ಲೇ, ನಗರವನ್ನು ಮತ್ತಷ್ಟು ಅಭಿವೃದ್ಧಿಯತ್ತ ಮುನ್ನಡೆಸಲು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಎರಡು ಮಹತ್ವದ ಪರಿಕಲ್ಪನೆಗಳನ್ನು ಪ್ರಸ್ತಾಪ ಮಾಡಿದ್ದಾರೆ.

ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕದಲ್ಲಿ ಅಗ್ರಸ್ಥಾನ ಪಡೆದಿರುವ ಬೆಂಗಳೂರು ನಗರದಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಆಮೂಲಾಗ್ರ ಸುಧಾರಣೆಗಳನ್ನು ತಂದು ಪ್ರತಿಯೊಬ್ಬರು ಸುಲಭ-ಸರಳವಾಗಿ ತೆರಿಗೆ ಪಾವತಿ ಮಾಡವಂತೆ ಮಾಡುವುದು ಹಾಗೂ ನಗರದ ಪ್ರತಿ ರಸ್ತೆಯ ಇತಿಹಾಸವನ್ನು ಕರಾರುವಕ್ಕಾಗಿ ದಾಖಲೆ ಮಾಡುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

bengaluru city arial dh 1553098309

ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಸುದ್ದಿಗಾರರ ಜತೆ ಹಂಚಿಕೊಂಡ ಡಿಸಿಎಂ ಅವರು, ಬೆಂಗಳೂರು ಅತ್ಯಂತ ಯೋಜಿತವಾಗಿ ಮತ್ತೂ ಅಗಾಧವಾಗಿ ಬೆಳೆಯುತ್ತಿದೆ. ಇನ್ನೊಂದು ದಶಕದೊಳಗೆ ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಜಗತ್ತಿನಲ್ಲೇ ಅಗ್ರನಗರವಾಗಿ ಹೊರ ಹೊಮ್ಮುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದರು.

ತೆರಿಗೆ ಸುಧಾರಣೆ ಹಾಗೂ ಸರಳೀಕರಣ:
ಸದ್ಯಕ್ಕೆ ಚಾಲ್ತಿಯಲ್ಲಿರುವ ನಗರದ ತೆರಿಗೆ ಪದ್ಧತಿ ಸರಳವಾಗಿಲ್ಲ. ಪ್ರತಿಯೊಬ್ಬ ಪ್ರಜೆಯೂ ಭರಿಸುವ ರೀತಿಯಲ್ಲಿ ಇಲ್ಲ. ಹೀಗಾಗಿ ಇಡೀ ತೆರಿಗೆ ವ್ಯವಸ್ಥೆಯನ್ನು ಜಾಗತಿಕ ಮಾನದಂಡಕ್ಕೆ ಅನುಗುಣವಾಗಿ ಸುಧಾರಣೆ ಮಾಡಬೇಕು. ತನ್ನ ಆಸ್ತಿಯ ಮೌಲ್ಯಕ್ಕೆ ತಕ್ಕಂತೆ ಪ್ರತಿ ಆಸ್ತಿ ಮಾಲೀಕನೂ ನಿರಾಯಾಸವಾಗಿ ಪಾವತಿ ಮಾಡುವಂತಿರಬೇಕು. ಹಾಗೆ ಮಾಡಿದರೆ, ಗಣನೀಯವಾಗಿ ತೆರಿಗೆ ಸಂಗ್ರಹ ಆಗುತ್ತದೆ. ಅಭಿವೃದ್ಧಿಗೆ ಸಂಪನ್ಮೂಲಗಳ ಕೊರತೆಯೂ ಆಗುವುದಿಲ್ಲ. ಮಿಗಿಲಾಗಿ ಆರ್ಥಿಕವಾಗಿ ಬೆಂಗಳೂರು ನಗರದ ಆಡಳಿತ ಸ್ವಾವಲಂಭನೆ ಸಾಧಿಸಲಿದೆ ಎನ್ನುವುದು ಉಪ ಮುಖ್ಯಮಂತ್ರಿಗಳ ಪ್ರತಿಪಾದನೆ.

Bengaluru Lockdown Police 5

ರಸ್ತೆಗಳ ಕರಾರುವಕ್ಕಾದ ಇತಿಹಾಸ:
ಬೆಂಗಳೂರು ನಗರದಲ್ಲಿ ಲೆಕ್ಕವಿಲ್ಲದಷ್ಟು ರಸ್ತೆಗಳಿವೆ. ಆದರೆ, ದಾಖಲೆಗಳಲ್ಲಿ ಅವುಗಳ ವಿವರಗಳು ಲಭ್ಯವಿಲ್ಲ. ಈ ಕಾರಣಕ್ಕೆ ಬಿಬಿಎಂಪಿಗೆ ರಸ್ತೆಗಳನ್ನು ನಿರ್ವಹಿಸುವುದು ಕಷ್ಟವಾಗಿದೆ. ಹೀಗಾಗಿ ನಗರ ಎಲ್ಲ ಗಾತ್ರದ ರಸ್ತೆಗಳ ಇತಿಹಾಸವನ್ನು ಯೋಜಿತವಾಗಿ ಸಿದ್ಧಪಡಿಸಿ ರೋಡ್ ಹಿಸ್ಟರಿ ಸಂಗ್ರಹ ಮಾಡುವುದು ಅತ್ಯಂತ ಜರೂರು ಎಂದು ಡಿಸಿಎಂ ಪ್ರತಿಪಾದಿಸಿದರು.

ರೋಡ್ ಹಿಸ್ಟರಿ ಸಿದ್ಧಪಡಿಸುವುದರಿಂದ ಆ ರಸ್ತೆ ನಿರ್ಮಾಣದ ಎಲ್ಲ ದಾಖಲೆಗಳು ವ್ಯವಸ್ಥಿತವಾಗಿ ಒಂದೆಡೆ ಸಂಗ್ರಹವಾಗುತ್ತವೆ. ರಸ್ತೆಯ ಅಗಲ-ಉದ್ದ, ಮ್ಯಾನ್‍ಹೋಲ್‍ಗಳ ವಿವರ, ಒಳಚರಂಡಿ, ಭೂಗರ್ಭದಲ್ಲಿನ ಯಾವುದೇ ರೀತಿಯ ಸಂಪರ್ಕ ಜಾಲ, ಮಳೆಗಾಲ ಬಂದಾಗ ಆ ರಸ್ತೆಯ ಸ್ಥಿತಿಗತಿ ಇತ್ಯಾದಿ ವಿವರಗಳನ್ನು ದಾಖಲು ಮಾಡಬೇಕು. ಹಾಗೆ ಮಾಡುವುದರಿಂದ ಎಂಜಿನಿಯರುಗಳಿಗೆ ರಸ್ತೆಗಳನ್ನು ನಿರ್ವಹಿಸುವುದು ಸುಲಭವಾಗುತ್ತದೆ ಹಾಗೂ ಒಮ್ಮೆಲೆ ಅಭಿವೃದ್ಧಿಪಡಿಸಿದರೆ ಅದು ಶಾಶ್ವತವಾಗಿರುವಂತೆ ಆಗಿಬಿಡುತ್ತದೆ ಎಂದು ಅವರು ತಿಳಿಸಿದರು.

Bengaluru Lockdown 7

ಹೆಗ್ಗಳಿಕೆ ಇದೆ, ಅದನ್ನು ಉಳಿಸಿಕೊಳ್ಳೋಣ
ಬೆಂಗಳೂರಿಗೆ ಉತ್ತಮ ನಗರ ಎಂಬ ಮೆಚ್ಚುಗೆ ಸಿಕ್ಕಿದೆ. ಅದರಿಂದ ಹಿಗ್ಗುವ ಬದಲು ನಮ್ಮ ನಗರವನ್ನು ಉತ್ತಮಪಡಿಸಲು ಇನ್ನಷ್ಟು ಶ್ರಮ ವಹಿಸಬೇಕು. ಸರ್ಕಾರ, ಪಾಲಿಕೆ, ಅಧಿಕಾರಿಗಳ ಜತೆಗೆ ನಗರಾಭಿವೃದ್ಧಿಯಲ್ಲಿ ಸಾರ್ವಜನಿಕರ ಮುಕ್ತ ಸಹಭಾಗಿತ್ವವೂ ಬಹಳ ಮುಖ್ಯವಾಗಿರುತ್ತದೆ. ಹೊಣೆಗಾರಿಕೆ ಮತ್ತು ಉತ್ತರದಾಯಿತ್ವವನ್ನು ಜನರು ರೂಢಿಸಿಕೊಂಡರೆ ಬೆಂಗಳೂರು ಬೆಸ್ಟ್ ಎನ್ನುವ ಹೆಗ್ಗಳಿಕೆಯನ್ನು ಯಾರಿಂದಲೂ ಅಳಿಸಲಾಗದು ಎನ್ನುತ್ತಾರೆ ಡಾ.ಅಶ್ವತ್ಥನಾರಾಯಣ.

ಅಷ್ಟೇ ಅಲ್ಲ; ನಗರಕ್ಕೆ ಸಂಬಂಧಿಸಿ ಸ್ಥಳೀಯ ಆಡಳಿತ, ಸರಕಾರ, ಕೈಗಾರಿಕೋದ್ಯಮಿಗಳು, ತಜ್ಞರು, ಜನರು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ನಗರದ ಅಭಿವೃದ್ಧಿಯ ಬಗ್ಗೆ ತುಡಿತವಿರುವುದು ಮಾತ್ರವಲ್ಲದೆ, ರಚನಾತ್ಮಕವಾಗಿ ಭಾಗಿಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರವೂ ಕೆಲಸ ಮಾಡುತ್ತಿದೆ ಎಂದರು.

Bengaluru Lockdown 3

ಬೆಂಗಳೂರು ಅಸಾಧಾರಣ ನಗರ. ಇಲ್ಲಿ ಎಲ್ಲವೂ ವ್ಯವಸ್ಥಿತವಾಗಿರಬೇಕು. ಜಗತ್ತಿನ ಹಾಟ್ ಫೇವರೀಟ್ ಹೂಡಿಕೆಯ ತಾಣವಿದು. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಅಮೆರಿಕದ ಸಿಲಿಕಾನ್ ವ್ಯಾಲಿಯನ್ನು ಮೀರಿಸುವಂತೆ ನಗರ ಬೆಳೆಯುತ್ತಿದೆ. ಸಂಶೋಧನೆ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ವೈದ್ಯಕೀಯ, ವೈಮಾನಿಕ, ರಕ್ಷಣೆ, ಎಲೆಕ್ಟ್ರಾನಿಕ್ಸ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ದೇಶದ ಮುಂಚೂಣಿ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ. ಹೀಗಾಗಿ ನಮ್ಮ ಬೆಂಗಳೂರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಆಗಿಬೇಕು ಎಂದು ಡಿಸಿಎಂ ಪ್ರತಿಪಾದಿಸಿದರು.

111 ನಗರಗಳಲ್ಲಿ ಬೆಂಗಳೂರು ಬೆಸ್ಟ್
ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಪ್ರಕಟಿಸಿರುವ ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದಿದೆ. ಈ ಸ್ಥಾನಕ್ಕೆ ಬರಲು ಬೆಂಗಳೂರು ನವದೆಹಲಿ, ಮುಂಬಯಿ, ಚೆನ್ನೈ, ಕೊಲ್ಕತಾ, ಹೈದರಾಬಾದ್ ಸೇರಿದಂತೆ ದೇಶದ 111 ನಗರಗಳಲ್ಲಿ ಬೆಂಗಳೂರು ಬೆಸ್ಟ್ ಎಂದು ಹೇಳಿದರು.

BENGALURU

ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದಿರುವುದು ನಮ್ಮೆಲ್ಲರ ಜವಾಬ್ದಾರಿ ಹೆಚ್ಚುವಂತೆ ಮಾಡಿದೆ. ಇನ್ನಷ್ಟು ವೈಜ್ಞಾನಿಕವಾಗಿ ಬೆಂಗಳೂರು ನಗರವನ್ನು ರೂಪಿಸಬೇಕು. ಮೂಲಸೌಕರ್ಯ, ನಿರ್ವಹಣೆ, ಪರಿಸರ ರಕ್ಷಣೆ, ಮಳೆ ನೀರು ಕೊಯ್ಲು, ಸಾರಿಗೆ ಮುಂತಾದ ಅಂಶಗಳ ಬಗ್ಗೆ ಹೆಚ್ಚು ಒತ್ತುಕೊಟ್ಟು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಡಿಸಿಎಂ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *