ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಬೇಬಿ ಬೆಟ್ಟಕ್ಕೆ ಹೋಗುವಾಗ ನನ್ನ ಕರೆದರೆ ನಾನು ಶಾಸಕನಾಗಿ ಹೋಗುತ್ತೇನೆ ಮತ್ತು ಬೇಕಿದ್ದರೆ ಅವರು ಎಲ್ಲಿಗೆ ಹೋಗಬೇಕು ಅಲ್ಲಿಗೆ ನಾನೇ ಕರೆದುಕೊಂಡು ಹೋಗುತ್ತೇನೆ ಎಂದು ಮೇಲುಕೋಟೆ ಶಾಸಕ ಪುಟ್ಟರಾಜು ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಬುಧವಾರ ಸಂಸದೆ ಸುಮಲತಾ ಅಂಬರೀಶ್ ಬರುವುದು ನನಗೆ ತಿಳಿದಿದೆ. ಈಗಾಗಲೇ ಅಧಿಕಾರಿಗಳೇ ಬೇಬಿ ಬೆಟ್ಟದ ಕೆಲವೆಡೆ ಟ್ರಂಚ್‍ಗಳು ಹೊಡೆದಿದ್ದಾರೆ. ಸಂಸದರು ಅಲ್ಲಿಗೆ ಹೋಗಬೇಕು ಎಂದರೆ ಟ್ರಂಚ್‍ಗಳನ್ನು ತೆರವು ಮಾಡಿಕೊಡುವಂತೆ ಹಾಗೂ ಎಲ್ಲಾ ಮಾಹಿತಿಯನ್ನು ಅವರಿಗೆ ನೀಡುವಂತೆ ಸೂಚನೆ ನೀಡಿದ್ದೇನೆ. ಬೇಕಿದ್ದರೆ ಸಂಸದರು ನನ್ನ ಭೇಟಿ ಬೆಟ್ಟಕ್ಕೆ ಬರುವಂತೆ ಆಹ್ವಾನ ಮಾಡಿದರು ನಾನು ಶಾಸಕನಾಗಿ ಹೋಗಿ ಅವರಿಗೆ ಬೇಕಾದ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತೇನೆ ಎಂದರು.
ನಾನು ಮಂಡ್ಯ ಜಿಲ್ಲಾಮಂತ್ರಿಯಾಗಿದ್ದ ವೇಳೆ ಕೆಆರ್‍ಎಸ್ ಭಾಗದಲ್ಲಿ ಶಬ್ದವೊಂದು ಕೇಳಿ ಬಂದಿತ್ತು. ಆ ವೇಳೆ ಬೇಬಿ ಬೆಟ್ಟದ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಿದ್ದೆ. ಅಲ್ಲದೇ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ತನಿಖೆ ನಡೆಸಿ ವರದಿಯನ್ನು ನೀಡಲು ಸಹ ತಿಳಿಸಿದ್ದವು. ಆಗ ಟ್ರಯಲ್ ಬ್ಲಾಸ್ಟ್ ಮಾಡಲು ಸಹ 20 ಲಕ್ಷ ರೂಪಾಯಿಯನ್ನು ಸಹ ನೀಡಿದ್ದವು, ಟ್ರಯಲ್ ಬ್ಲಾಸ್ಟ್ ಮಾಡಲು ತಜ್ಞರು ಬಂದಾಗ ಕೆಲವರು ತಡೆದರು. ಸರ್ಕಾರ ಕೂಡಲೇ ಟ್ರಯಲ್ ಬ್ಲಾಸ್ಟ್ ನಡೆಸಿ ಬೇಬಿ ಬೆಟ್ಟದ ಗಣಿಗಾರಿಕೆಯಿಂದ ಕೆಆರ್‍ಎಸ್‍ಗೆ ತೊಂದರೆ ಇದೆಯಾ ಇಲ್ಲವಾ ಎಂದು ವರದಿ ತರಿಸಿಕೊಳ್ಳಬೇಕು. ಒಂದು ವೇಳೆ ತೊಂದರೆಯಾದರೆ ಇಡೀ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ನಿಲ್ಲಿಸಿ, ಅಲ್ಲಿಂದ ಬೇರೆ ಕಡೆ ಅವರಿಗೆ ಅನುಮತಿ ನೀಡಿಬೇಕು ಎಂದರು. ಇದನ್ನೂ ಓದಿ: ಸಂಸದೆ ಸುಮಲತಾ ಆರೋಪಕ್ಕೆ ಸರ್ಕಾರದಿಂದ ಉತ್ತರವಿಲ್ಲ – ಸಿದ್ದರಾಮಯ್ಯ ವಾಗ್ದಾಳಿ
ಕನ್ನಂಬಾಡಿ ಕಟ್ಟೆ ಸುರಕ್ಷಿತವಾಗಿ ಇರಬೇಕು ಎನ್ನುವುದೇ ನಮ್ಮ ಆಸೆ. ಹೀಗಾಗಿ ಕಳೆದ ಮೂರು ವರ್ಷಗಳ ಹಿಂದೆಯೇ ನಮ್ಮ ಕುಟುಂಬಸ್ಥರನ್ನು ಬೇರೆ ಕಡೆಗೆ ಶಿಫ್ಟ್ ಮಾಡಿಸಿದ್ದೇನೆ. ಬೇಬಿ ಬೆಟ್ಟದಲ್ಲಿ ಎಲ್ಲಾ ಪಕ್ಷದ ಹಾಗೂ ಎಲ್ಲಾ ಸಮುದಾಯದ ಜನ ಗಣಿಗಾರಿಕೆ ಮಾಡುತ್ತಿದ್ದಾರೆ. ಇದು ಬಳ್ಳಾರಿ ಮೈನ್ಸ್‍ನ್ನು ಚೈನಾಗೆ ಕೊಡು ಸ್ಕೀಮ್ ರೀತಿ ಅಲ್ಲ. ಇಲ್ಲಿ ಸಾವಿರಾರು ಜನರು ಹೊಟ್ಟೆ ಪಾಡಿಗೆ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ವೈಜ್ಞಾನಿಕವಾಗಿ ವರದಿ ತೆಗೆದುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದರು. ಇದನ್ನೂ ಓದಿ: ಮಂಡ್ಯ ಕದನಕ್ಕೆ ಹೆಚ್‍ಡಿಕೆ ವಿರಾಮ – ದಳಪತಿ ಸೈಲೆಂಟ್ ಆಗಿದ್ದರ ಹಿಂದಿದ್ಯಾ ಲೆಕ್ಕಾಚಾರ..?
ಪುಟ್ಟರಾಜು ಕಾಂಗ್ರೆಸ್‍ಗೆ ಸೇರುತ್ತಾರೆ ಎನ್ನುವ ವಿವಾರಕ್ಕೆ ಸ್ಪಷ್ಟನೆ ನೀಡಿದ ಅವರು, ನನಗೆ ರಾಜಕೀಯ ಭವಿಷ್ಯ ನೀಡಿದ್ದು ದೇವೇಗೌಡರು. ರಾಜಕೀಯ ಮಾಡುವುದಾದರೆ ದೇವೇಗೌಡರ ಜೊತೆ ಮಾಡುತ್ತೇನೆ. ಕಾಂಗ್ರೆಸ್‍ಗೆ ಹೋಗುವ ಪ್ರಮಯವೇ ಇಲ್ಲ. ಇನ್ನೂ ಪ್ರಸಕ್ತ ಬೆಳವಣಿಗೆಯ ಬಗ್ಗೆ ಸ್ಪಷ್ಟೀಕರಣ ನೀಡದಂತೆ ನಮ್ಮ ವರಿಷ್ಠರಾದ ದೇವೇಗೌಡರು ಸೂಚನೆ ನೀಡಿದ್ದಾರೆ. ಹೀಗಾಗಿ ಯಾವುದೇ ಹೇಳಿಕೆಗಳನ್ನು ನಾವು ನೀಡುವುದಿಲ್ಲ ಎಂದರು. ಇದನ್ನೂ ಓದಿ: ಅಕ್ಕಾ ನಮ್ಮ ಕ್ಷೇತ್ರಕ್ಕೂ ಬನ್ನಿ, ಅಕ್ರಮ ಗಣಿಗಾರಿಕೆ ನಿಲ್ಲಿಸಿಕೊಡಿ: ಸುರೇಶ್‍ಗೌಡ