ಮುಂಬೈ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಶರದ್ ಅರವಿಂದ್ ಬೊಬ್ಡೆ ಅವರ ತಾಯಿ ಅವರಿಗೆ 2.5 ಕೋಟಿ ರೂ.ಗಳನ್ನು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಕುಟುಂಬ ಆಸ್ತಿ ನೋಡಿಕೊಳ್ಳುತ್ತಿದ್ದವನೇ ವಂಚನೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಪಸ್ ಘೋಷ್(49) ನನ್ನು ಮಂಗಳವಾರ ರಾತ್ರಿ ನಾಗ್ಪುರ ಎಸ್‍ಐಟಿ ಪೊಲೀಸರು ಬಂಧಿಸಿದ್ದಾರೆ. ಡಿಸಿಪಿ ವಿನಿತಾ ಸಾಹು ನೇತೃತ್ವದ ತಂಡ ಪ್ರಕರಣವನ್ನು ಬೇಧಿಸುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸಿಜೆಐ ತಾಯಿ ಮುಕ್ತಾ ಬೊಬ್ಡೆ ಅವರು ಆಸ್ತಿಯ ಮಾಲೀಕರಾಗಿದ್ದು, ಕುಟುಂಬಸ್ಥರೇ ಆಸ್ತಿ ನೋಡಿಕೊಳ್ಳಲು ಘೋಷ್‍ನನ್ನು ನೇಮಿಸಿದ್ದರು. ಈತ ಫ್ರಂಡ್ಸ್ ಕಾಲೋನಿ ನಿವಾಸಿಯಾಗಿದ್ದು, ಬೊಬ್ಡೆ ಕುಟುಂಬಸ್ಥರ ಆಸ್ತಿಯನ್ನು ಘೋಷ್ ಕಳೆದ 10 ವರ್ಷಗಳಿಂದ ನೋಡಿಕೊಳ್ಳುತ್ತಿದ್ದ ಎಂದು ತಿಳಿಸಿದ್ದಾರೆ.
ಮುಕ್ತಾ ಬೊಬ್ಡೆ ಅವರ ವೃದ್ಧಾಪ್ಯ ಹಾಗೂ ಆರೋಗ್ಯ ಸ್ಥಿತಿ ಹದಗೆಟ್ಟಿರುವುದರ ಲಾಭ ಪಡೆದುಕೊಂಡು ಘೋಷ್ ಭೂಮಿಗೆ ಸಂಬಂಧಿಸಿದ ಪಾವತಿ ರಶೀದಿಗಳನ್ನು ನಕಲಿ ಮಾಡಿ 2.5 ಕೋಟಿ ರೂ.ಗಳನ್ನು ವಂಚಿಸಿದ್ದಾನೆ. ಇನ್ನೂ ಹೆಚ್ಚಿನ ಹಣ ವಂಚಿಸಿರಬಹುದು ಎಂದು ಅಧಿಕಾರಿ ವಿವರಿಸಿದ್ದಾರೆ.
ಘೋಷ್ ಹಾಗೂ ಈತನ ಪತ್ನಿ ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗಾಗಿ ಜಾಗ ಬಾಡಿಗೆ ನೀಡಿ ಸಂಗ್ರಹಿಸಿದ ಎಲ್ಲ ಹಣವನ್ನು ಬೊಬ್ಡೆ ಅವರ ತಾಯಿ ಖಾತೆಗೆ ಜಮೆ ಮಾಡುತ್ತಿರಲಿಲ್ಲ. ವಂಚನೆ ಮಾಡಿರುವುದು ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಎಸ್‍ಐಟಿ ತಂಡ ರಚಿಸಿ ತನಿಖೆ ನಡೆಸಲು ಮುಂದಾಗಿದ್ದಾರೆ. ಈ ತಂಡಕ್ಕೆ ಆರ್ಥಿಕ ಅಪರಾಧಗಳ ತಂಡದ ಅಧಿಕಾರಿಗಳನ್ನು ಸಹ ನಿಯೋಜಿಸಿದ್ದಾರೆ.
ಮಂಗಳವಾರ ರಾತ್ರಿ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣ ಐಪಿಸಿಯ ಸಂಬಂಧಿಸಿದ ವಿವಿಧ ಸೆಕ್ಷನ್‍ಗಳಡಿ ಸೀತಾಬುಲ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಹಿಂದೆ ಘೋಷ್‍ನನ್ನು ವಿಚಾರಣೆ ನಡೆಸಲಾಗಿತ್ತು. ಬಳಿಕ ಬಂಧಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.