– ಮೇಘನಾಗಾಗಿ ತೊಟ್ಟಿಲು ಬೆಲೆ 15 ಸಾವಿರ ಕಡಿಮೆ
– ಪುರಾಣ ಕಥೆಯ ಚಿತ್ರಗಳನ್ನು ಒಳಗೊಂಡಿದೆ ಕಲಘಟಗಿ ತೊಟ್ಟಿಲು
ಬೆಂಗಳೂರು: ಜೂನಿಯರ್ ಚಿರು ಆಗಮನದಿಂದಾಗಿ ಚಿರಂಜೀವಿ ಸರ್ಜಾ ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದ್ದು, ಇನ್ನೂ ವಿಶೇಷವೆಂದರೆ ಮೇಘನಾ ರಾಜ್ ಸರ್ಜಾ ಅವರ ಸೀಮಂತ ಕಾರ್ಯದಿಂದ ಹಿಡಿದು, ಮಗುವನ್ನು ಸ್ನಾನ ಮಾಡಿಸುವುದು, ನಾಮಕರಣ ಮಾಡುವ ಶಾಸ್ತ್ರದ ವರೆಗೆ ಉತ್ತರ ಕರ್ನಾಟಕದ ಶೈಲಿಯನ್ನು ಅನುಸರಿಸಿರುವುದು ವಿಶೇಷವಾಗಿದೆ. ಈ ಬಗ್ಗೆ ಎಲ್ಲ ಶಾಸ್ತ್ರಗಳ ನೇತೃತ್ವ ವಹಿಸಿದ್ದ ವನಿತಾ ಗುತ್ತಲ್ ಅವರು ಹೇಗೆಲ್ಲ ಶಾಸ್ತ್ರ ನೆರವೇರಿಸಿದರು. ಯಾವ ರೀತಿ ಆರೈಕೆ ಮಾಡಲಾಗಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.
ವನಿತಾ ಅವರಿಗೆ ಹೊಳೆದದ್ದು ಹೇಗೆ?
ನಮ್ಮ ಪತಿ ಒಂದು ದಿನ ತಡವಾಗಿ ಬಂದರು, ಯಾಕೋ ಬರುವುದು ತಡವಾಯಿತು ಎಂದು ಕರೆ ಮಾಡಿದೆ. ಆಗ ನನ್ನ ಮಕ್ಕಳು ಅಪ್ಪ ಒಂದು ದಿನ ತಡವಾಗಿ ಬಂದಿದ್ದಕ್ಕೆ ನೀನಗೆ ತಡೆಯಲು ಆಗುತ್ತಿಲ್ಲ. ಚಿರು ಅವರು ತೀರಿದ್ದಾರೆ, ಮೇಘನಾ ಅವರ ಹೊಟ್ಟೆಯಲ್ಲಿ ಪಾಪು ಇದೆ ಅವರು ಹೇಗೆ ಇರಬೇಡ ಎಂದು ಪ್ರಶ್ನಿಸಿದರು. ಆಗ ನನ್ನ ಮನಸ್ಸಿಗೆ ತುಂಬಾ ನೋವಾಯಿತು. ತಕ್ಷಣವೇ ನಮಗೆ ಪರಿಚಯವಿದ್ದ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಅವರನ್ನು ಸಂಪರ್ಕಿಸಿ, ಮೇಘನಾ ಅವರ ಸೀಮಂತ ಶಾಸ್ತ್ರ ಮಾಡುವ ಬಗ್ಗೆ ಚರ್ಚಿಸಿದೆವು. ಅಲ್ಲದೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಾರುತಿ ಬಡಿಗೇರ್ ಅವರ ಬಳಿ ನೈಸರ್ಗಿಕ ಬಣ್ಣದಿಂದ ಕೈಯಿಂದ ಮಾಡಿದ ದೇಶದ ಸಂಸ್ಕೃತಿ, ಮಹಾಭಾರತ ಹಾಗೂ ರಾಮಾಯಣ ಸನ್ನಿವೇಶಗಳ ಚಿತ್ರಗಳನ್ನು ಒಳಗೊಂಡ ತೊಟ್ಟಿಲನ್ನು ತಯಾರಿಸಲು ಕೇಳಿಕೊಂಡೆವು.
ತೊಟ್ಟಿಲಿನ ಬೆಲೆ ಎಷ್ಟು?
ಕಲಘಟಗಿಯ ಕರಕುಶಲಕರ್ಮಿ ಮಾರುತಿ ಬಡಿಗೇರ್ ತೊಟ್ಟಿಲು ತಯಾರಿಸಿ ಕೊಟ್ಟರು. ಆರಂಭದಲ್ಲಿ ಒಂದು ತೊಟ್ಟಿಲಿಗೆ 1.10 ಲಕ್ಷ ರೂ. ಹೇಳಿದ್ದರು. ನಾನು ಮೇಘನಾ ಕುಟುಂಬಕ್ಕೆ ತೊಟ್ಟಿಲು ಕೊಡುತ್ತಿರುವುದು ತಿಳಿದು 15 ಸಾವಿರ ರೂ. ಕಡಿಮೆ ಮಾಡಿದರು. ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ತೊಂದರೆಯಾದಾಗ ಸಹಾಯ ಮಾಡುತ್ತೇವೆ. ಆದರೆ ಮೇಘನಾ ಅವರು ಇಷ್ಟು ಬೇಸರಗೊಂಡಿದ್ದಾರೆ. ಹೀಗಾಗಿ ಸಹಾಯ ಮಾಡಬೇಕು ಎಂದು ಈ ಕೆಲಸ ಮಾಡಲು ನಿರ್ಧರಿಸಿದೆವು ಎಂದು ವನಿತಾ ತಿಳಿಸಿದರು.
ಉತ್ತರ ಕರ್ನಾಟಕ ಶೈಲಿಯಲ್ಲಿ ಸೀಮಂತ
ಸರ್ಜಾ ಕುಟುಂಬಸ್ಥರನ್ನು ಹೇಗೆ ಸಂಪರ್ಕಿಸಬೇಕು ಎಂದು ನಮಗೆ ತಿಳಿದಿರಲಿಲ್ಲ. ಬಳಿಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾಗಿರುವ ಉಮೇಶ್ ಬಣಕಾರ್ ಅವರು ನಮ್ಮ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನವರು ಹೀಗೆ ಅವರನ್ನು ಸಂಪರ್ಕಿಸಿ, ಬಳಿಕ ಪ್ರಮೀಳಾ ಅವರನ್ನು ಸಂಪರ್ಕಿಸಿದೆವು. ಆರಂಭದಲ್ಲಿ ಸೀಮಂತ ಮಾಡುತ್ತೇವೆ ಎಂದು ಕೇಳಿದಾಗ ಅಷ್ಟೇನು ಆಸಕ್ತಿ ತೋರಲಿಲ್ಲ. ಬಳಿಕ ನಾವು ಕಾರ್ಯಕ್ರಮ ಮಾಡಲು ಮುಂದಾದಾಗ ಚೆನ್ನಾಗಿ ಸ್ಪಂದಿಸಿದರು. ಉತ್ತರ ಕರ್ನಾಟಕ ಶೈಲಿಯಲ್ಲೇ ಸೀಮಂತ ಮಾಡಿದೆವು. ಮೇಘನಾ ನಾನ್ ವೆಜ್ ಊಟ ಎಂದರೆ ಹೆಚ್ಚು ಇಷ್ಟ ಎಂದರು ಆಗ ಅಡಿಗೆ ಮಾಡಿ ಎರಡು ದಿನ ಬಿಟ್ಟು ಊಟ ತಂದುಕೊಟ್ಟೆವು. ಬಳಿಕ ಹೆರಿಗೆ ಆದಮೇಲೆ ಸಹ ಉತ್ತರ ಕರ್ನಾಟಕ ಶೈಲಿಯ ಕೊಬ್ಬರಿಖಾರ, ಅವಳಿ ಬೀಜ, ಅರಿಶಿಣ, ಬೆಳ್ಳುಳ್ಳಿ ಹೀಗೆ ನಮ್ಮ ಉತ್ತರ ಕರ್ನಾಟಕ ಪದ್ಧತಿಯಂತೆ ಎಲ್ಲ ಪದಾರ್ಥಗಳನ್ನು ಮೇಘನಾ ಮನೆಯವರಿಗೆ ನೀಡಿದೆವು ಎಂದು ತಿಳಿಸಿದರು.
ತೊಟ್ಟಿಲು ತಯಾರಿಗೆ ಬೇಕು 4-5 ತಿಂಗಳು
ಮಗುವನ್ನು ಸ್ನಾನ ಮಾಡಿಸಲು ನಮ್ಮ ಸದಸ್ಯರೊಬ್ಬರನ್ನು 10 ದಿನಗಳ ಕಾಲ ಮೇಘನಾ ಅವರ ಮನೆಯಲ್ಲಿಯೇ ಬಿಟ್ಟಿದ್ದೆವು. ಇದೀಗ ಮಗುವಿನ ನಾಮಕರಣಕ್ಕೆ 16 ಜನ ಸ್ತ್ರೀ ಸಂಘದ ಸದಸ್ಯರೆಲ್ಲ ಬಂದಿದ್ದೇವೆ. ಹುಟ್ಟಿದ ಮನಿ ಪುಟ್ಟ ಎಂದು ಹೇಳಿ ನಾನೇ ಮಗುವಿಗೆ ಹೆಸರಿಟ್ಟೆ ತುಂಬಾ ಖುಷಿಯಾಯಿತು. 4-5 ತಿಂಗಳ ಕಾಲ ಕೆಲಸ ಮಾಡಿ ತೊಟ್ಟಿಲು ತಯಾರಿಸಿದ್ದಾರೆ ವನಿತಾ ಗುತ್ತಲ್ ಅವರು ವಿವರಿಸಿದರು.
ಸ್ತ್ರೀ ಶಕ್ತಿ ಮಹಿಳಾ ಸೇವಾ ಸಂಸ್ಥೆಯನ್ನು 18 ವರ್ಷಗಳ ಹಿಂದೆ ಕಟ್ಟಿ ಬೆಳೆಸಿದ್ದೇನೆ. ಈ ಸಂಸ್ಥೆ ಅಡಿಯಲ್ಲಿ 27 ಸ್ತ್ರಿ ಶಕ್ತಿ ಸಂಘ ಸಂಸ್ಥೆಗಳು ಬರುತ್ತವೆ. ನಾವು ಎಲ್ಲರಿಂದಲೂ 10 ರೂ. ಸಂಗ್ರಹಿಸಿ ಅದೇ ಹಣವನ್ನು ನಾವು ಅನಿವಾರ್ಯವಿದ್ದ ಸದಸ್ಯರಿಗೆ ಸಾಲವನ್ನಾಗಿ ನೀಡಿ ಸಹಾಯ ಮಾಡಲಾಗುತ್ತವೆ. ರಾಜ್ಯಾದ್ಯಂತ ಮಹಿಳೆಯರಿಗೆ ತೊಂದರೆಯಾಗುತ್ತಿದ್ದಾಗ ಸಹಾಯ ಮಾಡುತ್ತೇವೆ ಎಂದು ತಿಳಿಸಿದರು.