ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಿಸಲು ಸಿ.ಡಿ.ಯಲ್ಲಿದ್ದ ಲೇಡಿ ಮುಂದಾಗಿದ್ದು, ತಮ್ಮ ಪರಿಚಿತ ವಕೀಲ ಜಗದೀಶ್ ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಎರಡು ಪುಟಗಳ ದೂರಿನಲ್ಲಿ ಯುವತಿ ಈ ಪ್ರಕರಣ ಶುರುವಾಗಿದ್ದು ಹೇಗೆ, ಎಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ವಿವರಿಸಿ ನನಗೆ ಹಾಗೂ ಕುಟುಂಬಸ್ಥರಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ದೂರಿನ ಸಂಪೂರ್ಣ ವಿವರ
ಗೆ,
ಬೆಂಗಳೂರು ನಗರ ಪೊಲೀಸ್ ಆಯುಕ್ತರು
ಇನ್ಫೆಂಟ್ರಿ ರಸ್ತೆ, ಬೆಂಗಳೂರು
ವಿಷಯ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಸಂರ್ಪ ಮಾಡಿ, ವಿಡಿಯೋ ಕರೆ ಮೂಲಕ ಅಶ್ಲೀಲ ಮಾತು, ನಗ್ನವಾಗಿ ಮಾತನಾಡಲು ಪುಸಲಾಯಿಸಿ ಕೆಲಸ ಕೊಡಿಸದೆ ವಂಚಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರು
ಮಾನ್ಯರೇ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಬೆಂಗಳೂರು ನಗರದಲ್ಲಿ ಉದ್ಯೋಗ ಹುಡುಕಿಕೊಂಡು ಬಂದು ನೆಲೆಸಿದ್ದು ಕಿರುಚಿತ್ರ ಮಾಡುವ ಸಲುವಾಗಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಒಮ್ಮೆ ಭೇಟಿ ಮಾಡಿದ್ದು ನಂತರ ಅವರು ನನ್ನ ಮೊಬೈಲ್ ನಂಬರ್ ಪಡೆದು ಕರೆ ಮಾಡುವುದಾಗಿ ತಿಳಿಸಿದರು. ನಂತರ ಅವರು ಕರೆ ಮಾಡಿ ನನ್ನ ಬಗ್ಗೆ ಕುಟುಂಬದ ಬಗ್ಗೆ ವಿಚಾರಿಸಿ ಸಲುಗೆ ಇಂದ ಮಾತನಾಡಲು ಆರಂಭಿಸಿದರು.
ಸಚಿವರು ನನ್ನನ್ನು ಅಷ್ಟು ಕಾಳಜಿಯಿಂದ ಮಾತನಾಡಿಸಿದ್ದು ನನಗೆ ತುಂಬಾ ಖುಷಿ ಆಗಿ ಅವರನ್ನು ಗೌರವದಿಂದ ಮಾತನಾಡಿಸಿದೆ. ಆಗಾಗ್ಗೆ ನನಗೆ ಕರೆ ಮಾಡಿ ಮಾತನಾಡಲು ಆರಂಭಿಸಿದರು. ನನಗೆ ತಮ್ಮ ಪ್ರಭಾವ ಬಳಸಿ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿದರು. ಆದರೆ ಸರ್ಕಾರಿ ನೌಕರಿ ಕೊಡಿಸುವ ಬದಲಾಗಿ ನೀನು ನನ್ನ ಜೊತೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಕೇಳಿದರು. ಅವರನ್ನು ಟಿವಿಗಳಲ್ಲಿ ನೋಡಿದ್ದು, ಮಂತ್ರಿ ಈ ರೀತಿ ಹೇಳಿದ ಮೇಲೆ ಕೆಲಸ ಕೊಟ್ಟೇ ಕೊಡಿಸುತ್ತಾರೆ ಎಂದು ನಂಬಿದೆ. ನನ್ನ ಬಳಿ ಕೊಡಲು ಲಕ್ಷಾಂತರ ಹಣ ಇಲ್ಲದೆ ಇರುವುದನ್ನು ಮುಂಚೆಯೇ ತಿಳಿದುಕೊಂಡು ಹಣದ ಬದಲು ಅವರ ಜೊತೆ ಸಹಕರಿಸಿ ಖುಷಿ ನೀಡಬೇಕು ಅಂತ ಕೇಳಿದ್ದರಿಂದ ನಂಬಿ ಅವರು ಕೇಳಿದಂತೆ ನಡೆದುಕೊಂಡು ಬಂದೆ. ಅವರು ದೆಹಲಿಯ ಕರ್ನಾಟಕ ಭವನದಲ್ಲಿ ಉಳಿದುಕೊಂಡಿದ್ದೇನೆ ಎಂದು ವಿಡಿಯೋ ಕರೆ ಮಾಡಿ ನನ್ನೊಂದಿಗೆ ಲೈಂಗಿಕ ವಿಚಾರಗಳನ್ನು ಮಾತನಾಡಿ ನನಗೆ ಬಟ್ಟೆ ತೆಗೆದು ನಗ್ನಳಾಗಿ ಖಾಸಗಿ ಅಂಗಾಂಗಗಳನ್ನು ತೋರಿಸುವಂತೆ ಕೇಳಿದರು. ನಾನು ಅವರು ಹೇಳಿದಂತೆಯೇ ಮಾಡಿದೆ.
ನಾನು ಎದುರು ಮಾತನಾಡಲು ಹೆದರಿ ಅವರು ಕೇಳಿದಂತೆ ಮಾಡಿರುತ್ತೇನೆ. ನಂತರ ಸರ್ಕಾರಿ ನೌಕರಿ ಬಗ್ಗೆ ಕೇಳಿದಾಗ ಸ್ವಲ್ಪ ಹಣ ಬೇಕಾದರೆ ಕೇಳು. ಕೆಲಸದ ಕತೆ ಆಮೇಲೆ ನೋಡೋಣ ಎಂದು ಅವಾಯ್ಡ್ ಮಾಡುತ್ತಿದ್ದರು.
ನಾನು ಯಾವಾಗ ಅವರಿಗೆ ನನ್ನನ್ನು ಹೇಗೆ ಬೇಕೋ ಹಾಗೆ ಬಳಸಿಕೊಂಡು ಈಗ, ಯಾಕೆ ಕೆಲಸ ಕೊಡುತ್ತಿಲ್ಲ. ಎಂದು ಕೇಳಿದಾಗ ಬೈಯ್ದು ಕಳಿಸಿದರು. ಇದಾದ ನಂತರ ಅವರು ನನ್ನೊಂದಿಗೆ ಮಾತನಾಡಿದ ಮತ್ತು ಲೈಂಗಿಕ ಸಂಭೋಗ ನಡೆಸಿದ ಅಶ್ಲೀಲ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ನಾನು ಇವರ ವಿರುದ್ಧ ದೂರು ನೀಡದಂತೆ ಈ ರೀತಿ ಕುತಂತ್ರವನ್ನು ರಮೇಶ ಜಾರಕಿಹೊಳಿ ಮಾಡಿರುತ್ತಾರೆ. ಹಣವಂತರು, ಪ್ರಭಾವಿಗಳಾದ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರಿಂದ ನನಗೂ ಮತ್ತು ನನ್ನ ಕುಟುಂಬದ ಸದಸ್ಯರಿಗೂ ಜೀವ ಬೆದರಿಕೆ ಇದೆ.
ನಾನು ದೂರು ನೀಡದಂತೆ ತಡೆಯಲು ಮತ್ತು ಅವರ ಕೈಗೆ ಸಿಕ್ಕರೆ ಕೊಂದು ಬಿಡಲು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ದಯಮಾಡಿ ತಾವು ನನಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಭದ್ರತೆ ನೀಡಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಕೆಲಸ ಕೊಡಿಸದೇ ಮೋಸ ಮಾಡಿ ಅಶ್ಲೀಲವಾಗಿ ನಿಂದಿಸಿ ಕೊಲೆ ಮಾಡಿಸಲು ಪ್ರಯತ್ನ ಮಾಡುತ್ತಿರುವ ರಮೇಶ್ ಜಾರಕಿಹೊಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ. ನಾನು ನೇರವಾಗಿ ಯಾವ ಠಾಣೆಗೂ ಬಂದು ದೂರು ನೀಡದಂತೆ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದ್ದಾರೆ. ನನ್ನ ಪರವಾಗಿ ಯಾರೂ ಮಾತನಾಡದಂತೆ ತೇಜೋವಧೆ ಮಾಡ್ತಿದ್ದಾರೆ. ಹಾಗೂ ನನಗೆ ಸಹಾಯ ಮಾಡಿದವರಿಗೆ, ಮಾಡುತ್ತಿರುವವರಿಗೆ ಟಾರ್ಗೆಟ್ ಮಾಡಿ ಅವರ ಮನೆ ಮತ್ತು ಕುಟುಂಬಸ್ಥರಿಗೆ ಹಿಂಸೆ ಕೊಡುತ್ತಿರುವುದರಿಂದ ಬಹಳ ನೋವಾಗಿದೆ.
ನನಗೆ ಭದ್ರತೆ ಇಲ್ಲದ ಕಾರಣ ಕೈಯಲ್ಲಿ ಬರೆದು ಈ ದೂರನ್ನು ನನಗೆ ಪರಿಚಿತರಾದ ವಕೀಲರಾದ ಜಗದೀಶ್ ಅವರ ಮೂಲಕ ಕಳುಹಿಸುತ್ತಿದ್ದೇನೆ. ದಯವಿಟ್ಟು ನನಗೆ ಆಗುತ್ತಿರುವ ಮಾನಸಿಕ ಹಿಂಸೆ ಮತ್ತು ನನ್ನ ಕುಟುಂಬದ ಸದಸ್ಯರು ಎದುರಿಸುತ್ತಿರುವ ಒತ್ತಡ ಅವರನ್ನು ಆತ್ಮಹತ್ಯೆಗೆ ಯತ್ನಿಸುವಂತೆ ಮಾಡಿದ್ದು ತಾವು ರಮೇಶ್ ಜಾರಕಿಹೊಳಿ ಮತ್ತು ಅವರ ಕಡೆಯವರಿಂದ ನಮಗೆ ಯಾವುದೇ ಅಪಾಯವಾಗದಂತೆ ರಕ್ಷಣೆ ನೀಡಬೇಕೆಂದು ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ.
ನಿಮ್ಮ ವಿಶ್ವಾಸಿ
26/3/2021