– ಹೊಟ್ಟೆ ನೋವು, ಮೂತ್ರವಿಸರ್ಜನೆ ಆಗದೆ ಮಹಿಳೆ ಕಂಗಾಲು
– ಟವೆಲ್ ಹೊರಗೆ ತೆಗೆದ ಖಾಸಗಿ ಆಸ್ಪತ್ರೆ ವೈದ್ಯರು
– ಮಹಿಳೆಯ ಪತಿ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ
ಚಂಡೀಗಡ: ಮಹಿಳೆಗೆ ಸಿಸೇರಿಯನ್ ಡೆಲಿವರಿ ಮಾಡಿಸಿದ ಬಳಿಕ ಗರ್ಭಕೋಶದಲ್ಲಿ ವೈದ್ಯರು ಟವೆಲ್ ಬಿಟ್ಟಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಪಂಜಾಬ್‍ನ ಲುಧಿಯಾನದ ಸಾರ್ವಜನಿಕ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಮಹಿಳೆಯ ಪತಿ ರವೀಂದ್ರ ಸಿಂಗ್, ಕುಟುಂಬಸ್ಥರು ಹಾಗೂ ಕೆಲ ಸಾಮಾಜಿಕ ಕಾರ್ಯಕರ್ತರು ಆಸ್ಪತ್ರೆಯ ಹೆರಿಗೆ ವಾರ್ಡ್ ಬಳಿ ಪ್ರತಿಭಟನೆ ನಡೆಸಲು ಆರಂಭಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ನಿರ್ಲಕ್ಷ್ಯ ವಹಿಸಿದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
Advertisement
Advertisement
ಶಿಮ್ಲಾಪುರಿ ನಿವಾಸಿ ರವೀಂದ್ರ ಅವರು ಡಿಸೆಂಬರ್ 7ರಂದು ತಮ್ಮ ಗರ್ಭಿಣಿ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ ಬಳಿಕ ವೈದ್ಯರು ಸಿಸೇರಿಯನ್ ಡೆಲಿವರಿ ಮಾಡುವುದಾಗಿ ತಿಳಿಸಿದ್ದಾರೆ.
Advertisement
ಮಾರನೇ ದಿನ ಸರ್ಜರಿ ಮಾಡಲಾಗಿದೆ. ನವಜಾತ ಶಿಶು ಸಂಪೂರ್ಣವಾಗಿ ಆರಾಮವಾಗಿದೆ. ಆದರೆ ಹೆರಿಗೆ ಬಳಿಕ ತಾಯಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಮೂತ್ರವಿಸರ್ಜನೆ ಮಾಡಲು ಸಹ ಸಾಧ್ಯವಾಗಿಲ್ಲ. ಈ ಕುರಿತು ವೈದ್ಯರಿಗೆ ತಿಳಿಸಿದರೆ, ಮಹಿಳೆಗೆ ನಿದ್ರಾಜನಕ ನೀಡಿ ಮಲಗಿಸಿದ್ದಾರೆ.
Advertisement
ಎರಡು ದಿನಗಳಾದರೂ ಮಹಿಳೆಗೆ ಹೊಟ್ಟೆ ನೋವು ಕಡಿಮೆಯಾಗದ್ದರಿಂದ ನಾನು ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಲು ವೈದ್ಯರಿಗೆ ತಿಳಿಸಿದೆ. ಆದರೆ ಅವರು ಪಟಿಯಾಲದ ರಾಜಿಂದ್ರ ಸರ್ಕಾರಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದರು. ಅಂತಿಮವಾಗಿ ಡಿಸೆಂಬರ್ 11ರಂದು ನಾನು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಕರೆದೊಯ್ದೆ. ಬಳಿಕ ವೈದ್ಯರು ನನ್ನ ಪತ್ನಿಗೆ ಚಿಕಿತ್ಸೆ ನೀಡಿದರು. ಅಲ್ಲದೆ ಗರ್ಭಕೋಶದಲ್ಲಿ ಟವೆಲ್ ಇರುವುದನ್ನು ಪತ್ತೆಹಚ್ಚಿದರು. ವೈದ್ಯರ ನಿರ್ಲಕ್ಷ್ಯದಿಂದಾಗಿ ನನ್ನ ಪತ್ನಿಯ ಜೀವವೇ ಹೋಗುತ್ತಿತ್ತು ಎಂದು ಮಹಿಳೆ ಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಸಿಂಗ್ ಅವರು ತಮ್ಮ ಪತ್ನಿಗೆ ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೆ ಖಾಸಗಿ ಆಸ್ಪತ್ರೆ ವೈದ್ಯರು ಮಹಿಳೆಯ ಗರ್ಭಕೋಶದಲ್ಲಿದ್ದ ಟವೆಲ್ ಹೊರಗೆ ತೆಗೆದಿದ್ದಾರೆ.