– ನಾನೊಬ್ಬ ಮೆಸೆಂಜರ್ ಆಗಿದ್ದು ಮೆಸೆಂಜರನ್ನು ಕೊಲ್ಲಬೇಡಿ
ಬೆಂಗಳೂರು: ಸಿಬಿಐಗೆ ನನಗಿಂತ ಹೆಚ್ಚಿನ ಮಾಹಿತಿ ಗೊತ್ತಿದೆ ಎಂದು ನಟಿ-ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದಾರೆ.
ಸ್ಯಾಂಡಲ್‍ವುಡ್ ಮೂರನೇ ಪೀಳಿಗೆಯ ಯುವ ನಟ-ನಟಿಯರು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಗೆ ಮಾಹಿತಿ ಕೂಡ ನೀಡಿದ್ದರು. ಇಂದು ಮತ್ತೆ ಎರಡನೇ ಬಾರಿ ಇಂದ್ರಜಿತ್ ಅವರು ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
ವಿಚಾರಣೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ನಾನು ನೀಡಿದ ಮಾಹಿತಿ ಬಗ್ಗೆ ಸ್ಪಷ್ಟನೆ ನೀಡಬೇಕಿತ್ತು. ಅದಕ್ಕೆ ನನ್ನನ್ನು ಕರೆಸಿದ್ದಾರೆ. ಬಂದು ಸ್ಪಷ್ಟನೆ ನೀಡಿದ್ದೇನೆ. ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಸಿಸಿಬಿ ಪೊಲೀಸರ ಮೇಲೆ ನನಗೆ ಭರವಸೆ ಇದೆ. ಅವರು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಅವರಿಗೆ ಕೆಲಸ ಮಾಡಲು ಸ್ವಾತಂತ್ರ್ಯ ಸಿಕ್ಕಿದೆ. ಇದೆಲ್ಲವೂ ಕ್ಲೀನ್ ಆಗುತ್ತದೆ ಎಂದು ಹೇಳಿದರು.
ನಾನು ಒಬ್ಬ ಮೆಸೆಂಜರ್. ಯಾರೇ ಆಗಲಿ ಮೆಸೆಂಜರ್ ಅನ್ನು ಕೊಲ್ಲಬೇಡಿ. ನಾನು ಪರಿವಾಳದ ರೀತಿ, ಮಾಹಿತಿ ಕೊಟ್ಟು ಅಧಿಕಾರಿಗಳ ತನಿಖೆಗೆ ಸಹಾಯವಾಗುವ ರೀತಿಯಲ್ಲಿ ಮಾಡುತ್ತಿದ್ದೇನೆ. ನನಗೆ ಏನೂ ತಿಳಿದೆ ಅದನ್ನು ಹೇಳಿದ್ದೇನೆ. ಅವರು ತನಿಖೆ ಮಾಡಲಿದ್ದಾರೆ. ಇದರಿಂದ ಸಮಾಜಕ್ಕೆ ಅರಿವಾಗಿದೆ, ಭಯ ಬಂದಿದೆ. ಚಿತ್ರರಂಗದ ನಟ-ನಟಿಯರಿಗೂ ಅರಿವಾಗಿದೆ. ಕಾಲೇಜು ವಿದ್ಯಾರ್ಥಿಗಳು ಈ ಮೆಸೇಜ್ ಹೋಗಬೇಕಿತ್ತು, ಹೋಗಿದೆ ಎಂದು ಇಂದ್ರಜಿತ್ ತಿಳಿಸಿದ್ದಾರೆ.
ಸಿಸಿಬಿ ಪೊಲೀಸರಿಗೆ ನನಗಿಂತ ಹೆಚ್ಚಿನ ಮಾಹಿತಿ ಇದೆ. ಅವರು ತನಿಖೆ ಮಾಡುತ್ತಿದ್ದಾರೆ. ನಾನು ಈಗ ಏನೇ ಹೇಳಿದರು ಅದ ತನಿಖೆಗೆ ಧಕ್ಕೆ ಆಗಲಿದೆ. ನನಗೆ ಯಾರದ್ದೋ ಸರ್ಟಿಫಿಕೆಟ್ ಬೇಕಿಲ್ಲ. ನಾನೂ ಕನ್ನಡದಲ್ಲಿ 9 ಸಿನಿಮಾ ಮಾಡಿದ್ದೇನೆ. ಬೇರೆ ಭಾಷೆಯಲ್ಲಿ ಸಿನಿಮಾ ಮಾಡಿದ್ದೇನೆ. ನನಗೆ ಜನರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ನನಗೆ ಚಿತ್ರರಂಗ ಒಳ್ಳೆಯ ದಾರಿಯಲ್ಲಿ ಹೋಗಬೇಕು. ಇಂದು ಯಾವುದೇ ಹೊಸ ಹೆಸರನ್ನು ಕೊಟ್ಟಿಲ್ಲ ಎಂದು ಇಂದ್ರಜಿತ್ ಹೇಳಿದ್ದಾರೆ.