ಉಡುಪಿ: ಸಿಸಿಟಿವಿ ಲೈವ್ ವೀಕ್ಷಕನಿಂದ ಕಟ್ಕೆರೆ ಶ್ರೀ ನಾಹಾದೇವಿ ಕಾಳಿಕಾಂಬ ಅಮ್ಮನ ದೇವಸ್ಥಾನದ ದೊಡ್ಡ ಕಳ್ಳತನ ತಪ್ಪಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಈ ಘಟನೆ ನಡೆದಿದೆ.
ಸುಮಾರು 25 ಸಾವಿರ ಮೌಲ್ಯದ ಆಭರಣಗಳನ್ನು ಕದ್ದಿರುವ ಕಳ್ಳರಿಗೆ, ಗೌಪ್ಯವಾಗಿ ಅಳವಡಿಸಿದ್ದ ಸಿಸಿಟಿವಿ ಲಕ್ಷಾಂತರ ಮೌಲ್ಯದ ಕಳ್ಳತನಕ್ಕೆ ಅಡ್ಡಗಾಲಿಟ್ಟಿದೆ. ಕಳೆದ ರಾತ್ರಿ ಕಳ್ಳರು ದೇವಸ್ಥಾನ ಹೊಕ್ಕುವ ಸಂದರ್ಭ ಸಿಸಿಟಿವಿ ವಯರ್ ಕಟ್ ಮಾಡಿ, ಡಿವಿಆರ್ ತೆಗೆದಿದ್ದಾರೆ. ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯವರು ಸೇಫ್ ಕುಂದಾಪುರ ಪ್ರಾಜೆಕ್ಟ್ ಸದಸ್ಯರ ಸಮಯಪ್ರಜ್ಞೆಯಿಂದ ಬಾರೀ ಕಳ್ಳತನ ತಪ್ಪಿದೆ. ದೇವಸ್ಥಾನದ ಮುಖ್ಯದ್ವಾರದ ಬಾಗಿಲು ಒಡೆದು ಒಳ ಪ್ರವೇಶಿಸಿದ ಕಳ್ಳರು ದೇವಸ್ಥಾನದ ಒಳಗಿನ ದೇವಿ ಮೂರ್ತಿಯ ಕೈಯಲ್ಲಿದ್ದ ಬೆಳ್ಳಿಯ ಖಡ್ಗ, ಕೊಡಲಿ ಕಳವುಗೈದಿದ್ದಾರೆ.
Advertisement
Advertisement
ಬಾಗಿಲಿಗೆ ಅಳವಡಿಸಿದ್ದ ಬೆಳ್ಳಿ ಲೇಪನವನ್ನು ಕಿತ್ತು ತೆಗೆಯಲು ಯತ್ನಿಸಿ ಹಾಳುಗೈದಿದ್ದಾರೆ. ರಾತ್ರಿ 1.27ರ ಹೊತ್ತಿಗೆ ಸಿಸಿ ಕ್ಯಾಮೆರಾ ಬಂದ್ ಆಗಿದೆ. ಇದನ್ನು ಗಮನಿಸಿದ ಸಿಸಿ ಕ್ಯಾಮೆರಾ ವೀಕ್ಷಕ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಠಾಣೆಯಿಂದ ಬೀಟ್ ಸಿಬ್ಬಂದಿ ತಕ್ಷಣ ದೇವಸ್ಥಾನದ ಬಳಿ ಬಂದಾಗ ಯಾವುದೋ ವಾಹನ ಬಂದದ್ದನ್ನು ಅರಿತ ಕಳ್ಳರು ಪರಾರಿಯಾಗಿದ್ದಾರೆ.
Advertisement
Advertisement
ದೇವಸ್ಥಾನದ 26 ಲಕ್ಷದ ಬೆಳ್ಳಿ, 5 ಲಕ್ಷದ ಮೌಲ್ಯದ ಸೊತ್ತುಗಳು ದೇಗುಲದಲ್ಲೇ ಉಳಿದಿದೆ. ಇದೇ ದೇವಸ್ಥಾನದಲ್ಲಿ ಈ ಹಿಂದೆ ಎರಡು ಬಾರಿ ಕಳ್ಳತನವಾಗಿತ್ತು. ಕುಂದಾಪುರ ಎ.ಎಸ್ಪಿ ಹರಿರಾಂ ಶಂಕರ್, ಸರ್ಕಲ್ ಇನ್‍ಸ್ಪೆಕ್ಟರ್ ಗೋಪಿಕೃಷ್ಣ, ಕುಂದಾಪುರ ಪಿಎಸ್‍ಐ ಹರೀಶ್ ಆರ್. ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಜಾಡು ಹಿಡಿದಿರುವ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.