– ಫಟಾಫಟ್ ಕಳ್ಳರಿಗಾಗಿ ಪೊಲೀಸ್ ಬೇಟೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕಾರ್ ಬ್ಯಾಟರಿ ಕಳ್ಳತನ ಮಾಡುವ ಗ್ಯಾಂಗ್ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದು, ಬ್ಯಾಟರಿ ಜೊತೆಗೆ ಸಿಸ್ಟಮನ್ನೂ ಕಳ್ಳತನ ಮಾಡುತ್ತಿರುವ ಗ್ಯಾಂಗ್ ಜನರ ನಿದ್ದೆಗೆಡುವಂತೆ ಮಾಡಿದೆ.
ಇತ್ತೀಚೆಗಷ್ಟೇ ಬೆಂಗಳೂರಿನ ನಂದಿನಿ ಲೇಔಟ್‍ನಲ್ಲಿ ಕೇವಲ 2 ನಿಮಿಷದಲ್ಲಿ ಕಾರಿನ ಬ್ಯಾಟರಿ ಕಳ್ಳತನ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ಖತರ್ನಾಕ್ ಬ್ಯಾಟರಿ ಕಳ್ಳರ ಗ್ಯಾಂಗ್‍ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಗ್ಯಾಂಗ್ ಬ್ಯಾಟರಿ ಕಳ್ಳತನದ ಕೃತ್ಯವನ್ನು ನಡೆಸುತ್ತಿದ್ದು, ದೃಶ್ಯಗಳಲ್ಲಿ ಮುಖಕ್ಕೆ ಮಾಸ್ಕ್ ಧರಿಸಿ ಬರುವ ಕಳ್ಳರು ಕೇವಲ 2 ನಿಮಿಷದಲ್ಲಿ ಕಾರಿನ ಬ್ಯಾಟರಿ ಕಳ್ಳತನ ಮಾಡಿದ್ದಾರೆ. ಸಿಲಿಕಾನ್ ಸಿಟಿಯ ಬಹುತೇಕ ಕಡೆ ಕಳ್ಳರ ಕೈ ಚಳಕ ಹೆಚ್ಚಾಗಿದ್ದು, ಕೃತ್ಯಕ್ಕೆ ಆಟೋವನ್ನು ಬಳಕೆ ಮಾಡಿರುವ ಆರೋಪಿಗಳು ಕೃತ್ಯದ ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಬೆಳಗ್ಗೆ ಎದ್ದು ಕಾರಿನ ಮಾಲೀಕರು ತಮ್ಮ ವಾಹನವನ್ನು ನೋಡಿದಾಗಲೇ ಕಳ್ಳತನ ಬೆಳಕಿಗೆ ಬರುತ್ತಿದೆ.