ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದೇ ದಿನ 16 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ್ದು, ಈ ವರೆಗೆ 21 ಪೊಲೀಸ್ ಠಾಣೆಗಳು ಸೀಲ್‍ಡೌನ್ ಆಗಿವೆ. ಒಟ್ಟು 1300 ಜನ ಪೊಲೀಸರು ಕ್ವಾರಂಟೈನ್‍ನಲ್ಲಿದ್ದಾರೆ.
ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ 7 ಜನ ಪೊಲೀಸರಿಗೆ ಸೋಂಕು ತಗುಲಿದೆ. ಅಲ್ಲದೆ ಕುಮಾರಸ್ವಾಮಿ ಲೇಔಟ್ ಟ್ರಾಫಿಕ್ ಮತ್ತು ಸಿಟಿ ಮಾರ್ಕೆಟ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ತಲಾ ಒಬ್ಬರಿಗೆ ಕೊರೊನಾ ದೃಢಪಟ್ಟಿದೆ. ಅಲ್ಲದೆ ಉಪ್ಪಾರಪೇಟೆ ಟ್ರಾಫಿಕ್ ಠಾಣೆಯ ಇಬ್ಬರಿಗೆ, ಕಾಮಾಕ್ಷಿಪಾಳ್ಯ ಟ್ರಾಫಿಕ್ ಠಾಣೆಯ ಇಬ್ಬರು, ಕೆ.ಎಸ್.ಲೇಔಟ್ ಟ್ರಾಫಿಕ್ ಠಾಣೆಯ ಒಬ್ಬ ಪೇದೆಗೆ ಹಾಗ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಇಬ್ಬರಿಗೆ ಪಾಸಿಟೀವ್ ಬಂದಿದೆ.
ಈ ವರೆಗೆ ಒಟ್ಟು 21 ಪೊಲೀಸ್ ಠಾಣೆಗಳು ಸೀಲ್‍ಡೌನ್ ಆಗಿದ್ದು, 1300 ಜನ ಪೊಲೀಸರು ಕ್ವಾರಂಟೈನ್‍ನಲ್ಲಿದ್ದಾರೆ. ನಗರದಲ್ಲಿ ಈ ವರೆಗೆ ಒಟ್ಟು 210 ಜನ ಪೊಲೀಸರಿಗೆ ಸೋಂಕು ತಗುಲಿದ್ದು, ಇನ್ನೂ 137 ಸಕ್ರಿಯ ಪ್ರಕರಣಗಳಿವೆ. ಈ ವರೆಗೆ ಐವರು ಪೊಲೀಸರು ಕೊರೊನಾಗೆ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಪ್ರತಿನಿತ್ಯ ಸಾವಿರದ ಲೆಕ್ಕದಲ್ಲಿ ಕೊರೊನಾ ಪ್ರಕರಣಗಳು ಬರುತ್ತಿದ್ದು, ಜನರನ್ನು ಭಯಭೀತರನ್ನಾಗಿಸಿದೆ. ಇಂದು ಮತ್ತೆ 1502 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರು ಒಂದರಲ್ಲೇ 889 ಜನರಿಗೆ ಸೋಂಕು ತಗುಲಿದೆ. ಒಟ್ಟು 8334 ಜನ ಈ ವರೆಗೆ ಗುಣಮುಖರಾಗಿದ್ದು, 9406 ಸಕ್ರಿಯ ಪ್ರಕರಣಗಳಿವೆ.