– ಬ್ಯಾನ್‍ಗೊಂಡ ಸಾವಿರ ಮುಖಬಲೆಯ ನೋಟುಗಳು ಪತ್ತೆ
ಹೈದರಾಬಾದ್: ಆಂಧ್ರ ಪ್ರದೇಶದ ಕೈಮಗ್ಗ ಹಾಗೂ ನೇಕಾರರ ಸಹಕಾರಿ ಸಂಘದ ಮಾಜಿ ಅಧ್ಯಕ್ಷನ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಚಿನ್ನಾಭರಣ, ಹಳೆ ಸಾವಿರ ರೂ. ಮುಖಬೆಲೆಯ ನೋಟು ಸೇರಿ ನಗದು ವಶಪಡಿಸಿಕೊಂಡಿದ್ದಾರೆ.
ಆಂಧ್ರ ಪ್ರದೇಶದ ರಾಜ್ಯ ಕೈಮಗ್ಗ ಹಾಗೂ ನೇಕಾರರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಗುಜ್ಜಲ ಶ್ರೀನಿವಾಸ ಅವರ ಮನೆ ಕಡಪ ಜಿಲ್ಲೆಯ ಖಾಜಿಪೇಟೆಯ ಮನೆಯ ಮೇಲೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಗುಜ್ಜಲ ಶ್ರೀನಿವಾಸ ಅವರ ಮನೆಯಲ್ಲಿ 3 ಕೆ.ಜಿ.ಚಿನ್ನಾಭರಣ, 2 ಕೆ.ಜಿ.ಬೆಳ್ಳಿ, 1 ಕೋಟಿ ರೂ.ಗೂ ಅಧಿಕ ನಗದು ಹಾಗೂ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ಆಶ್ಚರ್ಯವೆಂದರೆ ಅವರ ಮನೆಯಲ್ಲಿ ಸಿಕ್ಕ ಹಣದಲ್ಲಿ ಹಳೆ ನೋಟುಗಳು ಸಹ ಪತ್ತೆಯಾಗಿವೆ. ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಸುಮಾರು 4 ಸಾವಿರ ಕೋಟಿ ರೂ.ಭ್ರಷ್ಟಾಚಾರ ನಡೆದಿದೆ ಎಂದು ಕೈಮಗ್ಗ ಪ್ರಾಥಮಿಕ ಸಹಕಾರ ಸಂಘಗಳ ಅಧ್ಯಕ್ಷರ ಒಕ್ಕೂಟವು ಶ್ರೀನಿವಾಸಯ್ಯ ವಿರುದ್ಧ ಮುಖ್ಯಮಂತ್ರಿ ಜಗನ್‍ಮೋಹನ್ ರೆಡ್ಡಿ ಅವರಿಗೆ ದೂರು ನೀಡಿತ್ತು. ಅಲ್ಲದೆ ಭ್ರಷ್ಟಾಚಾರ ಎಲ್ಲಿ ನಡೆದಿದೆ ಎಂಬ ವಿವರಗಳನ್ನು ಸಹ ದೂರಿನಲ್ಲಿ ತಿಳಿಸಲಾಗಿತ್ತು. ವಿಜಿಲೆನ್ಸ್ ಆ್ಯಂಡ್ ಎನ್‍ಫೋರ್ಸ್‍ಮೆಂಟ್ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ನಂತರ ಸಿಬಿಐ ಅಧಿಕಾರಿಗಳು ಶ್ರೀನಿವಾಸ್ ಅವರ ಮನೆಯ ಶೋಧ ನಡೆಸಿದ್ದರು.