ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ ಸುರೇಶ್ ಮನೆಗಳ ಮೇಲೆ ನಡೆದ ಸಿಬಿಐ ದಾಳಿಗೆ ರಾಜಕೀಯ ಅರ್ಥ ಕಲ್ಪಿಸೋದು ಬೇಡ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಸಚಿವೆ ಇಂದು ದಿವಂಗತ ಸುರೇಶ್ ಅಂಗಡಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಸಹೋದರರ ವಿರುದ್ದ ಸಿಬಿಐ ದಾಳಿ ರಾಜಕೀಯ ಪ್ರೇರಿತವಲ್ಲ. ಅವರ ವಿರುದ್ಧ ಆರೋಪಗಳು ಇದ್ದ ಕಾರಣ ದಾಳಿ ಮಾಡಿದ್ದಾರೆ. ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವುದು ಬೇಡ. ದಾಳಿ ರಾಜಕೀಯ ಅನ್ನೋದು ಆದರೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವುದು ಸಹ ರಾಜಕೀಯ ಪ್ರೇರಿತ ಪ್ರತಿಭಟನೆ ಅಲ್ವಾ? ಎಂದರು. ಇದನ್ನೂ ಓದಿ: ಟ್ರಬಲ್ ಶೂಟರ್ ಇಂದು ಸಿಬಿಐಗೆ ಲಾಕ್ ಆಗಿದ್ದು ಹೇಗೆ?
ಇದೇ ವೇಳೆ ಸುರೇಶ್ ಅಂಗಡಿ ನಿಧನದಿಂದ ದೇಶ ಹಾಗೂ ರಾಜ್ಯಕ್ಕೆ ಬಹುದೊಡ್ಡ ನಷ್ಟ ಆಗಿದೆ. ಅಂಗಡಿ ಹೆಸರಿನಲ್ಲಿ ಸ್ಮಾರಕ ನಿರ್ಮಾಣ ಆಗಬೇಕು. ಅವರ ಆರಂಭ ಮಾಡಿದ ರೈಲ್ವೆ ಅವರ ಹೆಸರನ್ನು ಇಡಬೇಕು. ಅಂಗಡಿ ಕುಟುಂಬದವರಿಗೆ ಟಿಕೆಟ್ ನೀಡುವ ಬಗ್ಗೆ ನಮ್ಮ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ. ಅವರ ಕುಟುಂಬದವರಿಗೆ ಟಿಕೆಟ್ ಕೊಡಿಸುವ ಬಗ್ಗೆ ನಾನು ನಾಯಕರಿಗೆ ಮನವರಿಕೆ ಮಾಡುವೆ ಎಂದು ತಿಳಿಸಿದರು. ಇದನ್ನು ಓದಿ: ಭಂಡತನಕ್ಕೆ ಕೊನೆಯುಂಟೆ? ಮಾಡಿದ್ದುಣ್ಣೋ ಮಹಾರಾಯ: ಸಿ.ಟಿ.ರವಿ
ಇಂಧನ ಇಲಾಖೆಯಲ್ಲಿರುವಾಗ ಡಿಕೆಶಿಯವರ ಒಟ್ಟು 60 ಕೋಟಿ ಅಕ್ರಮ ಹಣದ ವಹಿವಾಟಿನ ಬಗ್ಗೆ ಜಾರಿ ನಿರ್ದೇಶನಾಲಯ(ಇಡಿ) ಹಾಗೂ ಆದಾಯ ತೆರಿಗೆ ಇಲಾಖೆ(ಐಟಿ) ಲೆಕ್ಕ ಹಾಕಿದೆ. ವಿದ್ಯುತ್ ಇಲಾಖೆಯಲ್ಲಿ ಏಜೆನ್ಸಿ ಮೂಲಕ ಭಾರೀ ಅಕ್ರಮ ಹಣ ವಹಿವಾಟಿನ ಆರೋಪ ಇದ್ದು, ಇದಕ್ಕೆ ಪೂರಕ ಸಾಕ್ಷಿಯನ್ನು ಇಡಿ ಹಾಗೂ ಐಟಿ ಇಲಾಖೆ ಕಲೆ ಹಾಕಿವೆ. ಅದರ ಆಧಾರದ ಮೇಲೆ ಇಂದು ಸಿಬಿಐ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮನೆಯ ಇಟ್ಟಿಗೆಗಳನ್ನೂ ತೆಗೆದುಕೊಂಡು ಹೋಗಲಿ – ಸಿಬಿಐ ದಾಳಿಗೆ ಡಿಕೆಶಿ ತಾಯಿ ಗರಂ