– ಹಣ ಪಡೆಯುದವನ್ನ ತಾನೇ ರೆಕಾರ್ಡ್ ಮಾಡ್ತಿದ್ದ
ಮೈಸೂರು: ಕಿರುತೆರೆ, ಬೆಳ್ಳಿತೆರೆಯಲ್ಲಿ ಮಿಂಚಬೇಕು ಅಂತ ಬಹಳಷ್ಟು ಜನರಿಗೆ ಆಸೆ ಇರುತ್ತೆ. ಇಲ್ಲೊಬ್ಬ ವಂಚಕ ಇದನ್ನೇ ಬಂಡವಾಳ ಮಾಡಿಕೊಂಡು ಬರೋಬ್ಬರಿ 50ಕ್ಕೂ ಹೆಚ್ಚಿನ ಮಹಿಳೆಯರಿಗೆ ಮೋಸ ಮಾಡಿದ್ದಾನೆ.
ಗಿರೀಶ್ ಅಲಿಯಾಸ್ ಸಿನಿಮಾ ಗಿರೀಶ್ ವಂಚನೆ ಮಾಡಿದ ವ್ಯಕ್ತಿ. ಈತ ಮೈಸೂರಿನ ಗುರುಕಾರ್ ರೇವಣ್ಣ ರಸ್ತೆಯ ನಿವಾಸಿ. ಇವನು ಮಹಿಳೆಯರಿಗೆ ಸಿನಿಮಾ, ಧಾರಾವಾಹಿಗಳಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ನಂಬಿಸಿ ಹಣ ಪಡೆದು ವಂಚಿಸಿದ್ದಾನೆ. ಸಿನಿಮಾ, ಧಾರಾವಾಹಿಯಲ್ಲಿ ಮಿಂಚಬೇಕು ಎನ್ನುವ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದನು.
ಮಹಿಳೆಯರಿಂದ ಹಣ ಪಡೆಯುವುದನ್ನು ತಾನೇ ಸ್ವತಃ ವಿಡಿಯೋ ಮಾಡುವ ಮೂಲಕ ಮಹಿಳೆಯನ್ನು ನಂಬಿಸುತ್ತಿದ್ದನು. ವಂಚನೆ ಮಾತ್ರವಲ್ಲದೇ ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೂಡ ನೀಡಿದ್ದಾನೆ. ಮೊದಲು ಸಿನಿಮಾ, ಧಾರಾವಾಹಿಗಾಗಿ ಕಲಾವಿದರು ಬೇಕು ಎಂದು ಜಾಹೀರಾತು ನೀಡುತ್ತಾನೆ. ಈ ಜಾಹೀರಾತು ನೋಡಿ ಈತನನ್ನು ಭೇಟಿ ಮಾಡಿದವರಿಗೆ ತಾನೇ ಕಥೆ ಹೇಳಿ ಯಾಮಾರಿಸುತ್ತಾನೆ. ಕೆಲವರಿಗೆ ತಾನು ಪೊಲೀಸ್ ಎಂದು ಕೂಡ ಸುಳ್ಳು ಹೇಳಿದ್ದಾನೆ. ಹೀಗೆ ಸುಳ್ಳು ಹೇಳಿ ಬರೋಬ್ಬರಿ 50ಕ್ಕೂ ಹೆಚ್ಚಿನ ಮಹಿಳೆಯರಿಗೆ ಮೋಸ ಮಾಡಿದ್ದಾನೆ.
ಇದೀಗ ವಂಚನೆಗೆ ಒಳಗಾದ ಮಹಿಳೆಯರು ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯಕ್ಕೆ ಆರೋಪಿ ಗಿರೀಶ್ ತಲೆ ಮರೆಸಿಕೊಂಡಿದ್ದಾನೆ. ಈ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಖತರ್ನಾಕ್ ಗಿರೀಶ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೇ ತಮಗೆ ನ್ಯಾಯ ಕೊಡಿಸುವಂತೆ ನಗರ ಪೊಲೀಸ್ ಕಮಿಷನರ್‌ಗೂ ಮಹಿಳೆಯರು ಮನವಿ ಮಾಡಿಕೊಂಡಿದ್ದಾರೆ.