ಸಿದ್ದಿ ಜನಾಂಗಕ್ಕೆ ಒಲಿದು ಬಂತು ಎಂಎಲ್‍ಸಿ ಪಟ್ಟ

Public TV
2 Min Read
Untitled 1 copy 2

ಕಾರವಾರ: ವಿಧಾನ ಪರಿಷತ್ ಸದಸ್ಯರಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬುಡಕಟ್ಟು ಜನಾಂಗದ ಶಾಂತಾರಾಮ ಬುದ್ನಾ ಸಿದ್ಧಿ ಆಯ್ಕೆಯಾಗುವ ಮೂಲಕ ಇಡೀ ರಾಜ್ಯದ ಜನರೇ ಆಶ್ಚರ್ಯ ಪಡುವಂತಾಗಿದೆ. ಇವರ ಕುರಿತು ಅಧಿಕೃತ ಪ್ರಕಟಣೆಯನ್ನು ರಾಜ್ಯಪಾಲರಾದ ವಜುಬಾಯಿ ವಾಲಾ ಹೊರಡಿಸಿದ್ದಾರೆ. ಅಷ್ಟಕ್ಕೂ ಇವರು ಯಾರು? ಏನು ಸಾಧನೆ ಎಂದು ತಿಳಿದರೆ ಇವರ ಮೇಲೆ ಗೌರವ ಹೆಚ್ಚಾಗಲಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಸಮುದಾಯದಲ್ಲಿ ಶಾಂತರಾಮ್ ಸಿದ್ದಿ ಅವರ ಹೆಸರು ದೊಡ್ಡದು. 55 ವರ್ಷ ವಯಸ್ಸನ್ನು ಅರ್ಥಪೂರ್ಣವಾಗಿ ಕಳೆದ ಶಾಂತರಾಮ್ ಸಿದ್ದಿಯವರು ಯಲ್ಲಾಪುರ ತಾಲೂಕಿನ ಹಿತ್ನಳ್ಳಿ ಗ್ರಾಮ ಪಂಚಾಯಿತಿಯ ಪುರ್ಲೆ ಮನೆಯ ಕಡು ಬಡತನದ ಕುಟುಂಬದಿಂದ ಬಂದವರು.

CM BSY 2

ಸಿದ್ದಿ ಸಮುದಾಯದಲ್ಲಿ ಅಕ್ಷರ ಎನ್ನುವ ಅರಿವಿರದ ಆ ಸಮಯದಲ್ಲಿಯೇ ಇಡೀ ಸಿದ್ದಿ ಜನಾಂಗದಲ್ಲಿ ಏಳನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಕೇಂದ್ರಕ್ಕೆ ಪ್ರಥಮ ಸ್ಥಾನಗಳಿಸಿದ ಕೀರ್ತಿ ಇವರದ್ದು. ಅಲ್ಲಿಗೆ ಶಿಕ್ಷಣವನ್ನು ಬಿಟ್ಟು ದುಡುಮೆಗಾಗಿ ಹೊರಟ ಇವರನ್ನು ತಡೆದ ಇವರ ಶಿಕ್ಷಕರು ಅಂಕೋಲದ ಮದರ್ ತೆರೇಸಾ ಪ್ರೊ.ನಿರ್ಮಲ ಗಾಂವ್ಕರ್ ಅವರ ಆಶ್ರಮದಲ್ಲಿ ಪಿ.ಎಂ.ಹೆಚ್.ಎಸ್.ಗೆ ಸೇರಿಸಿದರು. ನಂತರ ಕಾಲೇಜು ಶಿಕ್ಷಣಕ್ಕಾಗಿ ಕಾರವಾರದಲ್ಲಿ ಕೂಲಿ ಕೆಲಸ ಮಾಡಿ ಕಾಲೇಜು ಶಿಕ್ಷಣ ಪೂರೈಸಿದ ಸಿದ್ದ ಜನಾಂಗದ ಮೊದಲ ಪದವೀಧರ ಕೂಡ ಇವರಾಗಿದ್ದಾರೆ.

BJP Flag Final 6

ನಂತರ ಆರ್.ಎಸ್.ಎಸ್ ಸಕ್ರಿಯ ಕಾರ್ಯಕರ್ತರಾಗಿ ವನವಾಸಿ ಕಲ್ಯಾಣ ಸಂಸ್ಥೆಯನ್ನು ಕರ್ನಾಟಕ ರಾಜ್ಯದಲ್ಲಿ ಪ್ರಥಮವಾಗಿ ಮುಂಡಗೋಡಿನ ಚಿಪಗಿಯಲ್ಲಿ ಪ್ರಾರಂಭಿಸಿದರು. ಆ ಸಂಸ್ಥೆಯಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ಇಂದು ಇದೇ ಸಂಸ್ಥೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತಿದ್ದಾರೆ. ಇವರ ಮಾತೃ ಭಾಷೆ ಕೊಂಕಣಿಯಾದರೂ ಕನ್ನಡ ಭಾಷೆಯ ಅಭಿಮಾನ ಇವರದ್ದು. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿರುವ ಇವರು, ಕೊಂಕಣಿ ಅಕಾಡಮಿ ಸದಸ್ಯರಾಗಿ ಎರಡು ಅವಧಿ ಸೇವೆ ಸಲ್ಲಿಸಿದ್ದಾರೆ.

RSS

ಪಶ್ಚಿಮ ಘಟ್ಟ ಕಾರ್ಯಪಡೆಯ ಸದಸ್ಯರಾಗಿದ್ದು ಆಕಾಶವಾಣಿಯ ಸಲಹಾ ಸಮಿತಿಯ ಸದಸ್ಯರಾಗಿರುವುದಲ್ಲದೇ ಹತ್ತು ಹಲವು ಸಂಘಟನೆಗಳ ಮೂಲಕ ಸದಾ ಸಮಾಜಮುಖಿಯಾಗಿ ಕೆಲಸ ಮಾಡುವ ಅತ್ಯಂತ ಸರಳ ವ್ಯಕ್ತಿ. ಬಡತನದಲ್ಲಿಯೇ ಇರುವ ಇವರು ಪದವಿ ಮುಗಿಸಿದ ಮಗಳು ಪಿ.ಯು.ಸಿ ಓದುವ ಓರ್ವ ಮಗ ಹಾಗೂ ಪತ್ನಿಯೊಂದಿಗೆ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ಯಾವುದೇ ರಾಜಕೀಯ ಪ್ರಭಾವ ಬಳಸದೆ ಕಾಡಿನಲ್ಲಿ ಬದುಕು ಕಳೆಯುತ್ತಿರುವ ಸಿದ್ದಿ ಜನಾಂಗದ ಅಭಿವೃದ್ಧಿಗಾಗಿ ಹಾಗೂ ಹಸಿರು ಉಳಿವಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟು ಹೋರಾಟದ ಬದುಕು ಕಟ್ಟಿಕೊಂಡಿರುವ ಶಾಂತರಾಮ್ ಸಿದ್ದಿಯವರಿಗೆ ಈ ಸ್ಥಾನ ದೊರೆತಿದ್ದು ಸಿದ್ದಿ ಜನಾಂಗಕ್ಕೆ ನೀಡಿದ ಗೌರವವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *