ತುಮಕೂರು: ಮಾಜಿ ಸಿಎಂ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಹಾಗಾಗಿ ಸಿಎಂ ಯಡಿಯೂರಪ್ಪರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ ಎಂದು ಸಂಸದ ಜಿ.ಎಸ್.ಬಸವರಾಜ್ ಕಿಡಿಕಾರಿದರು.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರನ್ನು ಆಕರ್ಷಣೆ ಮಾಡಲು ಸಿದ್ದರಾಮಯ್ಯ ಈ ರೀತಿ ಮಾತನಾಡಬಹುದು, ಆದರೆ ಅವರ ಮಾತು ಸರಿಯಲ್ಲ ಎನ್ನುವ ಮೂಲಕ ಯಡಿಯೂರಪ್ಪರ ವಿರುದ್ಧ ಹಮಾರಾ ಕುತ್ತಾ ಹಮಾರ ಗಲಿಮೇ ಶೇರ್ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸಿದರು.
ಸಿದ್ದರಾಮಯ್ಯ ಸೋನಿಯಾ ಗಾಂಧಿ ಮುಂದೆ ಹೋಗಿ ರೋಪ್ ಹಾಕ್ತಾರಾ? ಸೋನಿಯಾ ಗಾಂಧಿ ಮುಂದೆ ನಿಂತು ಕೈ ಮುಗಿತಾರೆ, ಹೊರತು ಏನೂ ಮಾಡಲ್ಲ. ಹಾಗೇನೇ ಯಡಿಯೂರಪ್ಪ ಹೋಗಿ ಮೋದಿ ಅವರನ್ನು ಬೈಯೋಕಾಗುತ್ತಾ? ಎಂದು ಪ್ರಶ್ನಿಸಿದರು.
ಸಿಎಂ ಬದಲಾವಣೆ ವಿಚಾರ ಕುರಿತು ಮಾತನಾಡಿದ ಅವರು, ಯಡಿಯೂರಪ್ಪ ಸ್ವಂತ ಕ್ವಾಲಿಟಿ ಹೊಂದಿದ್ದಾರೆ. ಪಕ್ಷದಲ್ಲಿ ಹಿಡಿತ ಸಾಧಿಸಿದ್ದಾರೆ. ಪ್ರಬಲ ಸಮುದಾಯವನ್ನು ಪ್ರತಿನಿಸುತ್ತಿದ್ದಾರೆ. ಯಡಿಯೂರಪ್ಪರನ್ನು ಬಿಟ್ಟರೆ ಪರ್ಯಾಯ ನಾಯಕರು ಬಿಜೆಪಿಯಲ್ಲಿ ಇಲ್ಲ. ಸಿದ್ದರಾಮಯ್ಯ ಸಿಎಂ ಆದಗಲೂ ಬದಲಾವಣೆ ಕೂಗು ಕೇಳಿ ಬಂದಿತ್ತು. ಸಿದ್ದರಾಮಯ್ಯರನ್ನು ಬದಲಿಸಿ ದಲಿತ ಸಿಎಂ ಮಾಡಬೇಕು ಎಂಬ ಕೂಗು ಇತ್ತು. ಎಸ್.ಎಂ ಕೃಷ್ಣ ಸಿಎಂ ಆದಾಗ ಮಾತ್ರ ಯಾರೂ ಸಿಎಂ ಬದಲಾವಣೆ ಮಾಡಬೇಕು ಅಂದಿರಲಿಲ್ಲ. ಸ್ವತಃ ವಿರೋಧ ಪಕ್ಷದವರೂ ಚಕಾರ ಎತ್ತಿರಲಿಲ್ಲ ಎಂದರು.
ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಫೈಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಒಪ್ಪಿದರೆ ಡಿಕೆಶಿನೂ ಸಿಎಂ ಆಗಬಹುದು. ಆದರೆ ಜಿ.ಪರಮೇಶ್ವರ್ ಕೇವಲ ಡಿಸಿಎಂ ಆದಾಗಲೇ ಝಿರೋ ಟ್ರಾಫಿಕ್ ಮಾಡಿಕೊಂಡು ಓಡಾಡುತ್ತಿದ್ದರು. ಇನ್ನೇನು ಸಿಎಂ ಆಗಿಬಿಟ್ಟರೆ ಇಡೀ ತುಮಕೂರು ಜಿಲ್ಲೆನೇ ಝಿರೋ ಮಾಡಿಬಿಡುತ್ತಾರೆ. ಸಿಎಂ ಬರುತ್ತಾ ಇದ್ದಾರೆ ಅಂದರೆ ಪೊಲೀಸರು ನಮ್ಮನ್ನ ಮೂತ್ರ ಮಾಡಲಿಕ್ಕೆ ಹೋಗಲೂ ಬಿಡಲ್ಲ ಎಂದು ಜಿ.ಪರಮೇಶ್ವರ್ ವಿರುದ್ಧ ವ್ಯಂಗ್ಯವಾಡಿದರು.
ಎಚ್‍ಡಿಕೆ ಹಾಗೂ ಸಂಸದೆ ಸುಮಲತಾ ಮಾತಿನ ಸಮರ ಕುರಿತು ಮಾತನಾಡಿದ ಅವರು, ಸುಮಲತಾ ಒಬ್ಬ ಹೈಲಿ ಡಿಗ್ನಿಪೈಡ್ ಮಹಿಳಾ ಸಂಸದೆ. ಅವರು ಸಂಸತ್ತಿನಲ್ಲಿ ಮಾತನಾಡುವ ಗಾಂಭೀರ್ಯತೆ ನೋಡಿದರೆ ನಾವು ಹೆಮ್ಮೆ ಪಡಬೇಕು. ಆದರೆ ಕುಮಾರಸ್ವಾಮಿ ಆ ಹೆಣ್ಣುಮಗಳ ಬಗ್ಗೆ ಹಾಗೇ ಹೇಳಬಾರದಿತ್ತು. ಸಂಸದ ಪ್ರಜ್ವಲ್ ರೇವಣ್ಣರನ್ನ ಕೇವಲ ಸುಮಲತಾ ಮಾತ್ರ ಹೊಗಳಲಿಲ್ಲ. ನಾನು ಹೊಗಳಿದ್ದೇನೆ. ಆತ ಸಂಸತ್ತಿನಲ್ಲಿ ಮಾತಾಡಿದ್ದು ನೋಡಿ ನಾನು ಬೆನ್ನು ತಟ್ಟಿ ಬಂದಿದ್ದೇನೆ. ಇದನ್ನೇ ಮುಂದುವರಿಸು ಎಂದಿದ್ದೇನೆ. ಪ್ರಜ್ವಲ್ ಗೆ ಉತ್ತಮ ರಾಜಕೀಯ ಭವಿಷ್ಯವಿದೆ ಎನ್ನುವ ಮೂಲಕ ಪ್ರಜ್ವಲ್ ರೇವಣ್ಣರನ್ನು ಹೊಗಳಿದರು. ಇದನ್ನೂ ಓದಿ: ಮಂಡ್ಯದಲ್ಲಿ ಸುಮಲತಾ V/S ಕುಮಾರಸ್ವಾಮಿ – ಹೆಚ್‍ಡಿಕೆ ಪರ ಪ್ರತಾಪ್ ಸಿಂಹ ಬ್ಯಾಟಿಂಗ್