– ಯಾರನ್ನೂ ಟಾರ್ಗೆಟ್ ಮಾಡಿಲ್ಲ, ಮಾಡಲ್ಲ
ಉಡುಪಿ: ಯಾರು ಯಾರನ್ನು ಟಾರ್ಗೆಟ್ ಮಾಡುತ್ತಿಲ್ಲ. ಕಾಂಗ್ರೆಸ್ ನಲ್ಲಿ ಯಾರನ್ನು ಕಟ್ಟಿಹಾಕುವ ಅವಕಾಶ ಇಲ್ಲ ಎನ್ನುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಮೂರು ದಿನದ ಮೌನವ್ರತವನ್ನು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಕೃಷ್ಣನೂರಿನಲ್ಲಿ ಮುರಿದಿದ್ದಾರೆ. ಮೈಸೂರು ಪಾಲಿಕೆ ಮಿಸ್ಟರಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ವರದಿ ತರಿಸೋದಾಗಿ ಹೇಳಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಹೈಡ್ರಾಮಾ ರಾಜ್ಯ ಕಾಂಗ್ರೆಸ್ ನಲ್ಲಿ ತಲ್ಲಣ ಸೃಷ್ಟಿಸಿದೆ. ಕಾಂಗ್ರೆಸ್ ಬೆಂಬಲದಿಂದ ಜೆಡಿಎಸ್ ಪಾಲಿಕೆ ಗೆದ್ದು ಸ್ವಂತ ಅಖಾಡದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಮುಖಭಂಗವಾಗಿದೆ. ಯಾರನ್ನು ಟಾರ್ಗೆಟ್ ಮಾಡೋದಿಲ್ಲ. ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪ ಸುಳ್ಳು. ಪಾಲಿಕೆ ಒಳಗೇನಾಯ್ತೋ ವರದಿ ತರಿಸುತ್ತೇನೆ ಅಂತ ಉಡುಪಿ ಜಿಲ್ಲೆ ಬೈಂದೂರಿನಲ್ಲಿ ಹೇಳಿದ್ದಾರೆ.
ನಾವು ಮೈಸೂರು ಮಹಾನಗರಪಾಲಿಕೆಯಲ್ಲಿ ಅಧಿಕಾರ ಉಳಿಸಿಕೊಳ್ಳಬೇಕು ಎಂದು ಪ್ರಯತ್ನ ಮಾಡಿದ್ದೆವು. ಪಾಲಿಕೆ ಸದಸ್ಯರು ಒಳಗಡೆ ಬೇರೆಯೇ ತೀರ್ಮಾನ ಮಾಡಿದ್ದಾರೆ. ಯಾರ ಹೆಸರಿಗೂ ಗೌರವಕ್ಕೂ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತೇನೆ. ಯಾರನ್ನು ಕಟ್ಟಿ ಹಾಕೋದಕ್ಕೆ ನಾನು ಅವಕಾಶ ಕೊಡುವುದಿಲ್ಲ ಎಂದು ಡಿಕೆಶಿ ಡ್ಯಾಮೇಜ್ ಸರಿಪಡಿಸಲು ಪ್ರಯತ್ನ ಮಾಡಿದ್ರು.
ಸೋಮವಾರ ಡಿಕೆಶಿ- ತನ್ವೀರ್ ಸೇಠ್ ಮಾತುಕತೆ
ತನ್ವೀರ್ ಸೇಟ್ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ವಿಚಾರಕ್ಕೆ ಡಿಕೆ ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ನಾಯಕರ ಬಗ್ಗೆ ಯಾರು ಅವಹೇಳನಕಾರಿ ಹೇಳಿಕೆ ಕೊಡುವಂತಿಲ್ಲ. ಪಕ್ಷದ ನಿಲುವು ಸ್ಪಷ್ಟ ವಾಗಿದೆ. ತನ್ವೀರ್ ಸೇಠ್ ಗೆ ಸೋಮವಾರ ಬೆಂಗಳೂರಿ ಬರಲು ಹೇಳಿದ್ದೇನೆ. ಮೈಸೂರು ಪಾಲಿಕೆ ಒಳಗುಟ್ಟು ಗೊತ್ತಿದ್ದರೂ ಕನಕಪುರ ಬಂಡೆ ಅರ್ಧ ಸತ್ಯ ಮಾತ್ರ ಬಿಟ್ಟುಕೊಟ್ಟಿದ್ದಾರೆ.